ಶಿಕ್ಷಕರು ಕೋಮು ಪ್ರಚೋದನೆ ವಿಚಾರ ತುಂಬಿಸುವುದು ಸರಿಯಲ್ಲ: ರಮೇಶ್ ಕಾಂಚನ್
ಉಡುಪಿ, ಸೆ.6: ಶಿಕ್ಷಕರಾದವರು ತನ್ನ ಕಾಲೇಜಿನಲ್ಲಿ ಇರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭವಿಷ್ಯ ರೂಪಿಸುವ ವಿಚಾರ ಗಳನ್ನು ಹೇಳುವ ಬದಲು ಕೋಮು ಪ್ರಚೋದನೆಗೆ ಸಂಬಂಧಿಸಿದ ವಿಚಾರಗಳನ್ನು ತುಂಬಿಸುವುದು ಸರಿಯಲ್ಲ. ಇದು ನಮ್ಮ ಜಿಲ್ಲೆಯ ಸಂಸದರು ಮತ್ತು ಶಾಸಕರೂ ಕೂಡ ಅರ್ಥ ಮಾಡಿಕೊಳ್ಳಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ನೀಡಲಾಗಿರುವ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಯನ್ನು ತಡೆಹಿಡಿದಿರುವ ಕುರಿತು ಬಿಜೆಪಿ ನಾಯಕರು ಒಬ್ಬರ ನಂತರ ಒಬ್ಬರು ಎಂಬಂತೆ ಅಸಮರ್ಪಕ ಹೇಳಿಕೆ ನೀಡಲು ತೊಡಗಿರುವುದು ವಿಷಾದನೀಯ ಸಂಗತಿ. ಸರಕಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳು ತ್ತದೆ. ಅನಾವಶ್ಯಕ ಗೊಂದಲ ಸೃಷ್ಠಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದೇ ಬಿಜೆಪಿಯ ಚಾಳಿ ಎಂಬಂತೆ ವರ್ತಿಸುತ್ತಿರುವುದು ನಾಚಿಕೇಗೇಡಿನ ಸಂಗತಿಯಾಗಿದೆ ಎಂದರು.
ಅನಾವಶ್ಯಕವಾಗಿ ಕೋಮು ದ್ವೇಷದ ವಿಚಾರಗಳನ್ನು ಮುಂದಿಟ್ಟು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಒಳ್ಳೆಯ ಸಂಬಂಧವನ್ನು ಕೆಡಿಸುವ ಕೆಲಸವನ್ನು ಕೈಬಿಟ್ಟು ಅದೇ ವಿದ್ಯಾರ್ಥಿಗಳನ್ನು ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಕೆಲಸದಲ್ಲಿ ಶಿಕ್ಷಕರಿಗೆ ಬೆಂಬಲವಾಗಿ ನಿಲ್ಲುವ ಕೆಲಸ ನಡೆಯಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.