ನ.4ರಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಶಿರ್ವ, ಅ.31: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಕಾಪು ತಾಲ್ಲೂಕು ಘಟಕದ 5ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನವು ನಿವೃತ್ತ ಉಪನ್ಯಾಸಕ, ಕನ್ನಡ ಸಂಘಟಕ ಕೆ.ಎಸ್.ಶ್ರೀಧರ ಮೂರ್ತಿ ಶಿರ್ವ ಸರ್ವಾಧ್ಯಕ್ಷತೆಯಲ್ಲಿ ನ.4ರಂದು ಬಂಟಕಲ್ಲು ಶ್ರೀಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ಸಮ್ಮೇಳನವನ್ನು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಉದ್ಘಾಟಿಸಲಿರುವರು. ಕಸಾಪ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಶಿರ್ವ ಗ್ರಾಪಂ ಅಧ್ಯಕ್ಷೆ ಸವಿತಾ ರಾಜೇಶ್ ರಾಷ್ಟ್ರ ಧ್ವಜಾರೋಹಣ, ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪರಿಷತ್ತಿನ ಧ್ವಜಾರೋಹಣ ಗೈಯಲಿರುವರು. ‘ಸಿರಿಗನ್ನಡದ ಸೊಗಸು; ಭಾಷಾ ಶುದ್ಧತೆಯೆಡೆಗೆ ಪುಟ್ಟ ಹೆಜ್ಜೆ’ ಪರಿಕಲ್ಪನೆಯಲ್ಲಿ ದಿನವಿಡೀ ಗೋಷ್ಠಿಗಳು, ಸಂವಾದ, ಪ್ರಾತ್ಯಕ್ಷಿಕೆಗಳು ಜರಗಲಿವೆ.
ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಜಾನಪದ ಗಾಯಕ ಗಣೇಶ ಗಂಗೊಳ್ಳಿ ಅವರಿಂದ ಕನ್ನಡ ಗೀತಗಾಯನ, ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡ, ಪಾಂಬೂರು, ಪಡುಬೆಳ್ಳೆ ಇವರಿಂದ ಕಲಾ ಪ್ರಸ್ತುತಿ ನಡೆಯಲಿದೆ. ಕನ್ನಡದ ಬಗ್ಗೆ ಸೃಜನಾತ್ಮಕ ರಸಪ್ರಶ್ನೆ ನಡೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶೀನ ಪಾತ್ರಿ ನಂದಿಕೂರು (ದೈವಾರಾಧನೆ), ಹೇಮನಾಥ ಪಡುಬಿದ್ರಿ (ಪತ್ರಿಕೋದ್ಯಮ), ರಾಮಚಂದ್ರ ಭಟ್‌ಯೆಲ್ಲೂರು (ಯಕ್ಷಗಾನ), ರಘುರಾಮ ನಾಯಕ್ ಸಡಂಬೈಲು (ಕೃಷಿ), ನಾಗರಿಕ ಸೇವಾ ಸಮಿತಿ ಬಂಟಕಲ್ಲು(ಸೇವಾ ಸಂಘ ಸಂಸ್ಥೆ) ಇವರನ್ನು ಅದಾನಿ ಯುಪಿಸಿಎಲ್ ಘಟಕದ ಅಧ್ಯಕ್ಷ ಡಾ.ಕಿಶೋರ್ ಆಳ್ವಾ ಸಮ್ಮಾನಿಸಲಿರುವರು.
ಶೋಭಾಯಾತ್ರೆ: ಸಮ್ಮೇಳನದ ಪೂರ್ವಭಾವಿಯಾಗಿ ನ.3ರಂದು ಸಂಜೆ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ದಿಂದ ಸಮ್ಮೇಳನ ಸಭಾಂಗಣ ದವರೆಗೆ ಬಂಟಕಲ್ಲು ಸಾರ್ವಜನಿಕ ಶ್ರಿಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ನೇತೃತ್ವದಲ್ಲಿ ಕನ್ನಡಾಂಬೆಯ ಶೋಭಾಯಾತ್ರೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.