ಕಾಪು ತಾಲೂಕು ಕಸಾಪ ನೂತನ ಕಾರ್ಯಾಲಯ ಉದ್ಘಾಟನೆ
ಶಿರ್ವ: ಬಂಟಕಲ್ಲು ಬಸ್ ನಿಲ್ದಾಣದ ಸಮೀಪ ಉದ್ಯಮಿ ಬಂಟಕಲ್ಲು ಮಾಧವ ಕಾಮತ್‌ರವರ ಸಂಕೀರ್ಣದಲ್ಲಿ ಆರಂಭಿಸ ಲಾದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ನೂತನ ಕಾರ್ಯಾ ಲಯವನ್ನು ರವಿವಾರ ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯವೂ ಆರಂಭಗೊಂಡಿದ್ದು, ಕನ್ನಡ, ನಾಡು, ನುಡಿ ಜಾನಪದ ಸಾಹಿತ್ಯ ಚಟುವಟಿಕೆಗಳಿಗೆ ಪ್ರೇರಣಾ ಕೇಂದ್ರವಾಗಿ ಬೆಳಗಲಿ ಎಂದು ಹಾರೈಸಿದರು.
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ರಾಜ್ಯದಲ್ಲಿ ನೂತನ ತಾಲೂಕು ಆಗಿ ಪ್ರಾರಂಭಗೊಂಡ ಕಾಪುವಿನಲ್ಲಿ ಸಾಹಿತ್ಯ ಪರಿಷತುತಿ ಘಟಕ ಪ್ರಾರಂಭಗೊಂಡು ಪ್ರತೀ ವರ್ಷ ನಿರಂತರ ಐದು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ಕೀರ್ತಿ ಈ ತಾಲೂಕಿಗೆ ಸಂದಿದೆ. ಉಡುಪಿ ಜಿಲ್ಲೆಯಲ್ಲಿ ನೂತನ ಕಾರ್ಯಾಲಯವನ್ನು ಪ್ರಾರಂಭಿಸಿದ ಕೀರ್ತಿಯೂ ಕಾಪು ಘಟಕಕ್ಕೆ ಸಂದಿದೆ. ಅಧ್ಯಕ್ಷ ಮರಾಠೆಯವರ ನೇತೃತ್ವದ ಕ್ರೀಯಾಶೀಲ ತಂಡ ವ್ಯವಸ್ಥಿತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕಾರ್ಯವನ್ನು ನಡೆಸುತ್ತಿರುವುದು ಅಭಿನಂದನೀಯ ಎಂದರು.
ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಜಿಲ್ಲಾ ಕೋಶಾಧ್ಯಕ್ಷ ಮನೋಹರ ಪಿ. ಶುಭ ಹಾರೈಸಿದರು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕ ಹಾಗೂ ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆಯವರನ್ನು ಸನ್ಮಾನಿಸಲಾಯಿತು. ಕಾರ್ಯಾಲಯಕ್ಕೆ ಉಚಿತವಾಗಿ ಸ್ಥಳಾವಕಾಶ ನೀಡಿ ಪ್ರೋತ್ಸಾಹಿಸಿದ ಸಂಕೀರ್ಣದ ಮಾಲಕ ಮಾಧವ ಕಾಮತ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ದೀಪಕ್ ಕೆ.ಬೀರ, ಕೆ.ಆರ್.ಪಾಟ್ಕರ್, ಸದಸ್ಯರಾದ ಮಧುಕರ್ ಎಸ್.ಕಲ್ಯಾ, ಕೃಷ್ಣಕುಮಾರ್ ರಾವ್ ಮಟ್ಟು, ದೇವದಾಸ್ ಪಾಟ್ಕರ್ ಮುದರಂಗಡಿ, ಹಾಜಿ ಅಬ್ಬಾಸ್ ಸಾಹೇಬ್ ಕಣ್ಣಂಗಾರ್ ಉಪಸ್ಥಿತರಿದ್ದರು. ಕಸಾಪ ಕಾರ್ಯದರ್ಶಿ ನೀಲಾನಂದ್ ನಾಯ್ಕ್ ವಂದಿಸಿದರು. ಸದಸ್ಯ ಎಸ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.