ಕಾರ್ಕಳ| ಸಿಬಿಐ ಅಧಿಕಾರಿ ಹೆಸರಿನಲ್ಲಿ ಮಹಿಳೆಗೆ 24 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಕಾರ್ಕಳ: ಸಿಬಿಐ ಅಧಿಕಾರಿ ಎಂದು ಹೇಳಿ ಕರೆ ಮಾಡಿ ಮಹಿಳೆಯೊಬ್ಬರಿಗೆ 24 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀಮ ಶರಿಲ್ ಡಿಸೋಜ(38) ಎಂಬವರ ಮೊಬೈಲ್‌ಗೆ ಜ.7ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಆಧಾರ್ ನಂಬರಿನಿಂದ ಉತ್ತರ ಪ್ರದೇಶದಲ್ಲಿ ಬೇರೆ ಸಿಮ್ ಖರೀದಿಸಿ ಬೇರೆ ಬೇರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿ ಯಾಗಿದ್ದು, ನಿಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದೆ ಎಂದು ಹೇಳಿ, ಈ ಬಗ್ಗೆ ಸೈಬರ್ ಅಧಿಕಾರಿ ಮಾತನಾಡುತ್ತಾರೆ ಎಂದು ತಿಳಿಸಿ ವೀಡಿಯೋ ಕಾಲ್ ಮಾಡಿದ್ದರು.
ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯು ತಾನು ಸಿಬಿಐ ಅಧಿಕಾರಿ ಎಂದು ಹೇಳಿ, ಪ್ರೀಮ ಅವರ ಬ್ಯಾಂಕ್ ಖಾತೆಗಳಲ್ಲಿರುವ ಹಣದ ವಿವರ ಪಡೆದು ಕೊಂಡರು. ಅದರಲ್ಲಿದ್ದ ಹಣವನ್ನು ವರ್ಗಾವಣೆ ಮಾಡದಿದ್ದರೆ ಅರೆಸ್ಟ್ ವಾರಂಟ್ ಕಳುಹಿಸುವುದಾಗಿ ಬೆದರಿಸಿದರು. ಇದರಿಂದ ಹೆದರಿದ ಪ್ರೀಮ, ತನ್ನ ಖಾತೆಯಿಂದ ಒಟ್ಟು 24 ಲಕ್ಷ ರೂ. ಅಪರಿಚಿತರು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿ ಮೋಸ ಹೋಗಿರುವುದಾಗಿ ದೂರಲಾಗಿದೆ.