ಕಾರ್ಕಳ | ಬಂಗ್ಲೆಗುಡ್ಡೆ ಸದ್ಭಾವನ ನಗರದಲ್ಲಿ ಕಲುಷಿತ ನೀರು ಪೂರೈಕೆ: ಆರೋಪ
ಕಾರ್ಕಳ, ಅ.6: ಕಾರ್ಕಳ ಪುರಸಭಾ ವ್ಯಾಪ್ತಿಯ ಬಂಗ್ಲೆಗುಡ್ಡೆ ಸದ್ಭಾವನ ನಗರ ಗುಂಡ್ಯ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಕಲುಷಿತ, ವಾಸನೆಯುಕ್ತ ನೀರು ಸರಬರಾಜು ಆಗುತ್ತಿದೆ ಎಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ.
ಪುರಸಭೆಯ ಗುಂಡ್ಯದಲ್ಲಿರುವ ಬಾವಿಯಿಂದ ಸ್ಥಳೀಯವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಈ ಬಾವಿಯಲ್ಲಿ ನೀರು ಎಲೆ ಕಸಕಡ್ಡಿ ತುಂಬಿ ತೀರಾ ಕಲುಷಿತಗೊಂಡಿದ್ದು, ಹಳದಿ ಬಣ್ಣಕ್ಕೆ ತಿರುಗಿ ವಾಸನೆಯಿಂದ ಕೂಡಿದೆ. ಇದೇ ನೀರಿನಾಶ್ರಯವನ್ನು ನಂಬಿಕೊಂಡಿರುವ ಇಲ್ಲಿನ ನಾಗಕರಿಕರು ಬೇರೆ ಉಪಾಯವಿಲ್ಲದೆ ತಮ್ಮ ದೈನಂದಿನ ಕಾರ್ಯ ಹಾಗೂ ಕುಡಿಯಲು ಇದೇ ನೀರು ಬಳಸುವಂತಾಗಿದೆ.
ಈ ಬಾವಿಯ ಪಕ್ಕದಲ್ಲೆ ತೋಡೊಂದು ಹರಿಯುತ್ತಿದ್ದು ಇದರ ಕಲುಷಿತ ನೀರು ಕೂಡ ಬಾವಿಗೆ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ದಿನಕ್ಕೆರಡು ಬಾರಿ ಪುರಸಭಾ ನೀರು ಸರಬರಾಜು ನೌಕರರು ಈ ಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದರೂ ಈ ಬಗ್ಗೆ ಗಮನಹರಿಸದೆ ಇರುವುದು ಮಾತ್ರವಲ್ಲದೆ, ಪುರಸಭೆಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು
ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪುರಸಭೆಯ ಗುಂಡ್ಯ ಬಾವಿಯಿಂದ ಸರಬರಾಜು ಮಾಡುವ ನೀರು ಎಲೆ ಕಸ ಕಡ್ಡಿ ಕಲುಷಿತಗೊಂಡಿದ್ದು, ಹಳದಿ ಬಣ್ಣಕ್ಕೆ ತಿರುಗಿ ವಾಸನೆಯುಕ್ತವಾಗಿದೆ. ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ಬೇರೆ ವ್ಯವಸ್ಥೆ ಇಲ್ಲ. ಬಾವಿ ನೀರು ಕಲುಷಿತಗೊಂಡಿರುವುದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತದೆ. ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕೂಡಲೇ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಸಹಕರಿಸಬೇಕಿದೆ.
-ಪ್ರತಿಮಾ ರಾಣೆ
ಸ್ಥಳೀಯ ಪುರಸಭಾ ಸದಸ್ಯೆ