ಕಾರ್ಕಳ: ನಾಪತ್ತೆಯಾಗಿದ್ದ ಹೆಡ್ಕಾನ್ಸ್ಟೇಬಲ್ ಮೃತದೇಹ ಪತ್ತೆ
ಉಡುಪಿ: ಅ.15ರಂದು ರಾತ್ರಿ ಮನೆಯಿಂದ ಕರ್ತವ್ಯಕ್ಕೆಂದು ಕಾರ್ಕಳ ನಗರ ಠಾಣೆಗೆ ತೆರಳಿದ ಬಳಿಕ ಅ.19ರಂದು ಮನೆಗೆ ಬರುತ್ತಿರುವುದಾಗಿ ದೂರವಾಣಿ ಕರೆ ಮಾಡಿ ಹೇಳಿದ ಬಳಿಕ ನಾಪತ್ತೆಯಾಗಿದ್ದ ಕಾರ್ಕಳ ನಗರ ಠಾಣೆಯ ಹೆಡ್ಕಾನ್ಸ್ಟೇಬಲ್ ಶೃತಿನ್ ಶೆಟ್ಟಿ (35) ಅವರ ಮೃತದೇಹ ಸೋಮವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ಬಳಿ ಇರುವ ಶ್ರೀಲಕ್ಷ್ಮೀದೇವಿ ಕಲ್ಯಾಣ ಮಂಟಪದ ಬಳಿ ಪತ್ತೆಯಾಗಿದೆ.
ಕಾಪು ತಾಲೂಕು ಮಜೂರು ಗ್ರಾಮದ ಜನಾರ್ದನ ದೇವಸ್ಥಾನದ ಬಳಿ ಇರುವ ಅಂಗಡಿಮನೆ ನಿವಾಸಿಯಾದ ಶೃತಿನ್ ಶೆಟ್ಟಿ, ಎರಡು ತಿಂಗಳ ಹಿಂದಷ್ಟೇ ಬಡ್ತಿ ಪಡೆದು ಕಾರ್ಕಳ ನಗರ ಠಾಣೆಗೆ ವರ್ಗಾವಣೆಗೊಂಡಿದ್ದರು. ಅ.15ರಂದು ರಾತ್ರಿ ಮನೆಯಿಂದ ಕರ್ತವ್ಯಕ್ಕೆಂದು ತೆರಳಿದ್ದ ಅವರು ಅ.19ರ ಬೆಳಗ್ಗೆ 7:30ಕ್ಕೆ ಪತ್ನಿಗೆ ಕರೆ ಮಾಡಿ ತಾನೀಗ ನಂದಿಕೂರಿನಲ್ಲಿದ್ದು, ಮನೆಗೆ ಬರುವುದಾಗಿ ತಿಳಿಸಿದ್ದರೆನ್ನಲಾಗಿದೆ. ಅನಂತರ ಅವರ ಫೋನ್ ಸ್ವೀಚ್ಆಪ್ ಆಗಿತ್ತು. ಅವರ ನಾಪತ್ತೆ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಂದು ಬೆಳಗ್ಗೆ ಅವರ ಮೃತದೇಹ ಸಾಣೂರು ಗ್ರಾಮದ ಶ್ರೀಲಕ್ಷ್ಮೀದೇವಿ ಕಲ್ಯಾಣಮಂಟಪದ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳದಿಂದ ಮೃತದೇಹವನ್ನು ಮೇಲಕ್ಕೆತ್ತಿ ನೋಡಿದಾಗ ಶೃತಿನ್ ಶೆಟ್ಟಿ ಅವರದೆಂದು ದೃಢಪಡಿಸ ಲಾಗಿದೆ. ಯಾವುದೋ ಕಾರಣದಿಂದ ಮನಸ್ಸಿಗೆ ಬೇಸರಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.