ಕಾರ್ಕಳ: ಬಿಜೆಪಿ ಸದಸ್ಯರಿಂದ ಪುರಸಭೆ ಮುಖ್ಯಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ
ಕಾರ್ಕಳ: ಅಧಿಕಾರಿಗಳು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಆಡಳಿತಾದಿಕಾರಿಗಳು ಪುರಸಭಾ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಮುಂಡ್ಲಿ ಜಲಾಶಯದ ನೀರನ್ನು ಖಾಸಗಿ ವಿದ್ಯುತ್ ಕಂಪನಿಯು ಬೇಕಾಬಿಟ್ಟಿಯಾಗಿ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಕಾರ್ಕಳದ ಪುರಸಭಾ ಕಛೇರಿಯ ಮುಖ್ಯಾಧಿಕಾರಿ ಛೇಂಬರ್ ಮುಂಭಾಗದಲ್ಲಿ ಧರಣಿ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಪುರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರದೀಪ್, ಅಧಿಕಾರಿಗಳು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಆಡಳಿತಾಧಿಕಾರಿಗಳು ಪುರಸಭೆಗೆ ಬಾರದೆ ಪ್ರವಾಸಿ ಮಂದಿರದಲ್ಲಿಯೇ ಕಡತಗಳಿಗೆ ಸಹಿ ಹಾಕಿ ತೆರಳುತ್ತಾರೆ. ಯಾವುದೇ ವಿಚಾರದಲ್ಲಿ ಪುರಸಭಾ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಮುಂಡ್ಲಿ ಜಲಾಶಯದಲ್ಲಿ ನೀರಿನ ಒಳ ಹರಿವು ಕಡಿಮೆ ಇದ್ದರೂ ಮುಂಡ್ಲಿ ಜಲಾಶಯದ ನೀರನ್ನು ಖಾಸಗಿ ವಿದ್ಯುತ್ ಕಂಪನಿಯು ಬೇಕಾಬಿಟ್ಟಿಯಾಗಿ ದುರ್ಬಳಕೆ ಮಾಡುತ್ತಿದೆ. ಆದರೂ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಳೆದ ಬೇಸಿಗೆಯಲ್ಲಿ 50 ಲಕ್ಷ ರೂಪಾಯಿ ಕೇವಲ ಟ್ಯಾಂಕರ್ ಗಳಲ್ಲಿ ವಾರ್ಡ್ ಗಳಿಗೆ ನೀರು ಸರಬರಾಜು ಮಾಡಲು ವ್ಯಯಿಸಲಾಗಿದೆ ಈ ಬಾರಿಯೂ ಖಾಸಗಿ ಜಲ ವಿದ್ಯುತ್ ಕಂಪೆನಿಯಿಂದಾಗಿ ಸಮಸ್ಯೆ ಉಲ್ಬಣವಾಗಲಿದೆ. ರಸ್ತೆ ಗುಂಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಗಳಾಗುತ್ತಿದೆ. ಪುರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ಗಿಡಗಂಟಿಗಳು ತುಂಬಿಕೊಂಡು ಹಲವಾರು ಬಾರಿ ಮನವಿ ನೀಡಿದರೂ ಕೆಲಸ ನಿರ್ವಹಿಸಲು ಟೆಂಡರ್ ಆಹ್ವಾನಿಸಿಲ್ಲ. ನಾವು ಪ್ರತಿಭಟನೆಗೆ ಕುಳಿತಿದ್ದರೂ ಅಧಿಕಾರಿಗಳು ನಮ್ಮನ್ನು ವಿಚಾರಿಸಿಲ್ಲ. ಅಧಿಕಾರಿಗಳಿಂದಾಗಿ ವಾರ್ಡ್ ಗಳ ಪರಿಸ್ಥಿತಿ ತುಂಬಾ ಹದಗೆಟ್ಟು ಹೋಗಿದೆ. ಕಳೆದ ಕೆಲವಾರು ತಿಂಗಳಿಂದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನಡೆಯದೇ ಇದ್ದು ಕೌನ್ಸಿಲ್ ಸಭೆಗಳು ನಡೆಯದೆ ತುಂಬಾ ತೊಂದರೆಗಳು ಆಗುತ್ತಿದೆ. ಇದರಿಂದಾಗಿ ಸದಸ್ಯರಾದ ನಾವು ಈ ಪರಿಸ್ಥಿತಿ ಅನುಭವಿಸುತ್ತಿದ್ದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ , ಸದಸ್ಯೆ ಸುಮಾ ಕೇಶವ್, ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ,ಸದಸ್ಯ ಯೋಗೀಶ್ ದೇವಾಡಿಗ, ಮಾಜಿ ಉಪಾಧ್ಯಕ್ಷೆ ಪಲ್ಲವಿ, ಸದಸ್ಯರಾದ ಭಾರತೀ ಅಮೀನ್, ಪ್ರಶಾಂತ್ ಕೋಟ್ಯಾನ್, ಶಶಿಕಲಾ ಶೆಟ್ಟಿ, ನೀತಾ ಆಚಾರ್ಯ ,ಮಮತಾ ಪೂಜಾರಿ ಉಪಸ್ಥಿತರಿದ್ದರು.
ಸ್ಪಂದಿಸುತ್ತಿಲ್ಲ ಎಂಬ ಆರೋಪ ಸರಿಯಲ್ಲ; ಆರೋಪಗಳಿಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ
ಅಧಿಕಾರಿಗಳು ಪುರಸಭಾ ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವುದು ಸರಿಯಲ್ಲ. ಮುಂಡ್ಲಿ ಜಲಾಶಯದ ನೀರಿನ ಮಟ್ಟ ಮಳೆಯಿಂದಾಗಿ ಜಾಸ್ತಿಯಾದ ಕಾರಣ ನೀರು ಜಲಾಶಯದ ಮೇಲ್ಭಾಗದಲ್ಲಿ ಹರಿದು ಹೋಗುತ್ತಿದೆ. ವಿದ್ಯುತ್ ಕಂಪೆನಿಗೆ ಗೇಟುಗಳನ್ನು ತೆರೆಯದಂತೆ ಸೂಚನೆ ನೀಡಲಾಗಿದೆ. ಸ್ಥಳೀಯರು ಗೇಟಗಳನ್ನು ತೆರೆಯಲು ಕರೆ ಮಾಡಿದರೂ ಸಾರ್ವಜನಿಕರ ಅಗತ್ಯತೆಯ ದೃಷ್ಟಿಯಿಂದ ಗೇಟ್ ಗಳನ್ನು ತೆರೆದಿಲ್ಲ. ಪುರಸಭಾ ದಿನಕೂಲಿ ನೌಕರರ ಮೂಲಕ, ಕಟ್ಟಿಂಗ್ ಮಿಷನ್ ಗಳನ್ನು ಬಳಸಿ ಗಿಡಗಂಟಿಗಳನ್ನು ಕೀಳುವ ಕೆಲಸ ಪ್ರಾರಂಭಿಸಿ ಕೆಲಸ ನಡೆಯುತ್ತಿದೆ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ತಿಳಿಸಿದರು.
ಎಲ್ಲಾ ವಾರ್ಡ್ ಗಳಲ್ಲಿ ಏಕ ಕಾಲದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವಾದರೂ ಹೆಚ್ಚಿನ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆಯುತ್ತಿದೆ. ಆಡಳಿತಾಧಿಕಾರಿಗಳು ಪುರಸಭಾ ಕಛೇರಿಗೆ ನಿಯಮಿತ ಭೇಟಿ ನೀಡುತ್ತಿದ್ದಾರೆ. ಎಲ್ಲ ಕಡತ ದಾಖಲೆಗಳನ್ನು ಕೂಲಕುಂಷವಾಗಿ ನೋಡಿ ತಿಳಿದು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.