ಕಾರ್ಕಳ ಅತ್ಯಾಚಾರ ಪ್ರಕರಣ: ದಸಂಸ ನಿಯೋಗ ಭೇಟಿ
ಕಾರ್ಕಳ, ಆ.24: ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ನಿಯೋಗ ಶನಿವಾರ ಸಂತ್ರಸ್ತೆಯ ಮನೆ ಹಾಗೂ ಡಿವೈಎಸ್ಪಿ ಅವರನ್ನು ಭೇಟಿ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಒತ್ತಾಯಿಸಿದೆ.
ಈ ಕುರಿತು ಮಾತನಾಡಿದ ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ನಾವು ಯುವತಿಯ ಮನೆಗೆ ಹೋಗಿ ಮನೆಯವರನ್ನು ಭೇಟಿ ಮಾಡಿದ್ದೇವೆ. ತುಂಬಾ ಬಡ ಕುಟುಂಬ. ಕಲ್ಲು ಕೋರೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ ಎಂದು ತಿಳಿಸಿದರು.
ಇಂತಹ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ನಡೆದಿರುವುದು ಅತ್ಯಂತ ನಾಚಿಕೆ ಗೇಡು. ಈ ಪ್ರಕರಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಪೊಲೀಸ್ ಇಲಾಖೆ ಸರಿಯಾದ ತನಿಖೆ ನಡೆಸಬೇಕು ಎಂದು ಡಿವೈಎಸ್ಪಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ ಎಂದರು.
ಪ್ರಕರಣದ ತನಿಖೆಯನ್ನು ಕಾಟಾಚಾರಕ್ಕೆ ಮಾಡಿದರೆ ಮತ್ತೆ ಮತ್ತೆ ಮರುಕಳಿಸುತ್ತಿರುತ್ತದೆ. ಜಿಲ್ಲೆಯಲ್ಲಿ ಎಸ್‌ಸಿಎಸ್‌ಟಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ ವಾಗಿದೆ. ಆದುದರಿಂದ ಈ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಕುಟುಂಬಕ್ಕೆ ನ್ಯಾಯ ನೀಡಬೇಕು ಎಂದು ಅವರು ಒತ್ತಾಯಿಸಿದರು.
ನಿಯೋಗದಲ್ಲಿ ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಮಂಜುನಾಥ್ ಗಿಳಿಯಾರು ಮೊದಲಾದವರು ಉಪಸ್ಥಿತರಿದ್ದರು.