ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ
ಡ್ರಗ್ಸ್ ಪೂರೈಸಿದ ಮತ್ತಿಬ್ಬರು ಆರೋಪಿಗಳ ಬಂಧನ
ಉಡುಪಿ, ಆ.29: ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗೆ ಡ್ರಗ್ಸ್ ಪೂರೈಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಆಂಧ್ರ ಪ್ರದೇಶದ ವೈಎಸ್‌ಆರ್(ಕಡಪ) ಜಿಲ್ಲೆಯ ಗಿರಿರಾಜು ಜಗಾಧಾಬಿ (31) ಹಾಗೂ ಕಟಪಾಡಿ ಶಂಕರಪುರದ ಜಾನ್ ನೊರೋನ್ಹಾ (30) ಬಂಧಿತ ಆರೋಪಿಗಳು. ಇವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್(ಎನ್‌ಡಿಪಿಎಸ್) ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ಕಾಯಿದೆಯಡಿ ಅತ್ಯಾಚಾರ ಪ್ರಕರಣದ ಆರೋಪಿ ಗಳಾದ ಕಾರ್ಕಳ ಬಂಗ್ಲೆಗುಡ್ಡೆಯ ಅಲ್ತಾಫ್ (34), ಕಾರ್ಕಳ ಕೋರ್ಟ್ ರಸ್ತೆಯ ಅಭಯ್(23) ವಿರುದ್ಧವೂ ಪ್ರಕರಣ ದಾಖಲಾಗಿದೆ. ಕಾರ್ಕಳ ರಂಗನಪಲ್ಕೆಯ ಸಾವಿವೋ ರಿಚರ್ಡ್ ಕ್ವಾಡ್ರಸ್(35) ಮದ್ಯ ತಂದು ಕೊಟ್ಟಿರುವುದರಿಂದ ಈ ಪ್ರಕರಣದಲ್ಲಿ ಆರೋಪಿಯಾಗಿಲ್ಲ. ಈತ ಅತ್ಯಾಚಾರ ಎಸಗಿದ ಅಲ್ತಾಫ್, ಯುವತಿಗೆ ನೀಡಲು ಡ್ರಗ್ಸ್ ಪೂರೈಸಿದ ಅಭಯ್ ಜೊತೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ನಾಲ್ವರು ಪೊಲೀಸ್ ಕಸ್ಟಡಿಗೆ: ಎರಡು ದಿನಗಳ ಹಿಂದೆ ವಶಕ್ಕೆ ಪಡೆದು ಕೊಂಡ ಗಿರಿರಾಜು ಹಾಗೂ ಜಾನ್ ನರೋನ್ಹಾ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಆ.28ರಂದು ಬಂಧಿಸಿದ್ದಾರೆ. ಅವರನ್ನು ಕೂಡ ಅದೇ ದಿನ ಕಾರ್ಕಳದ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ಪೈಕಿ ಅಭಯ್‌ನನ್ನು ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಉಳಿದ ಇಬ್ಬರು ಆರೋಪಿಗಳಾದ ಅಲ್ತಾಫ್ ಹಾಗೂ ರಿಚರ್ಡ್ ಕ್ವಾಡ್ರಸ್ ಅವರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅವಧಿ ಆ.27ಕ್ಕೆ ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಕಾರ್ಕಳ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಇವರ ಪೈಕಿ ಅಲ್ತಾಫ್‌ನನ್ನು ಹೆಚ್ಚಿನ ತನಿಖೆ ಒಳಪಡಿಸಬೇಕಾಗಿರುವುದರಿಂದ ಮತ್ತೆ ಪೊಲೀಸ್ ವಶಕ್ಕೆ ನೀಡುವಂತೆ ಪೊಲೀಸರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಕೋರ್ಟ್ ಅಲ್ತಾಫ್‌ನನ್ನು ಮತ್ತೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ರಿಚರ್ಡ್ ಕ್ವಾಡ್ರಸ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಸಂತ್ರಸ್ತೆಯನ್ನು ಕಾರ್ಕಳ ನ್ಯಾಯಾಲಯದ ಮುಂದೆ ಬುಧವಾರ ಪೊಲೀಸರು ಹಾಜರುಪಡಿಸಿದ್ದು, ಆಕೆ ನ್ಯಾಯಾದೀಶರ ಮುಂದೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಸೀಲ್ ಮಾಡ ಲಾಗಿದ್ದು, ಇದೀಗ ಆ ಹೇಳಿಕೆ ಪೊಲೀಸರ ಕೈಸೇರಿದೆ ಎಂದು ತಿಳಿದು ಬಂದಿದೆ. ಜಾರ್ಜ್‌ಶೀಟ್ ಸಲ್ಲಿಕೆ ಸಮಯದಲ್ಲಿ ಈ ಲಕೋಟೆ ಸೀಲ್‌ನ್ನು ತನಿಖಾಧಿಕಾರಿಗಳು ತೆರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.