ಕಾರ್ಕಳ: ವಿಷದ ಬಾಟಲಿ ನುಂಗಿದ ನಾಗರಹಾವಿನ ರಕ್ಷಣೆ
ಕಾರ್ಕಳ: ವಿಷದ ಬಾಟಲಿಯನ್ನು ನುಂಗಿದ ನಾಗರಹಾವನ್ನು ಉರಗ ತಜ್ಞರೊಬ್ಬರು ರಕ್ಷಿಸಿದ ಘಟನೆ ಕಾರ್ಕಳ ನೀರೆ ಬೈಲೂರು ಎಂಬಲ್ಲಿ ಫೆ.6ರಂದು ರಾತ್ರಿ ವೇಳೆ ನಡೆದಿದೆ.
ನೀರೆಬೈಲೂರಿನ ಮನೆಯೊಂದಕ್ಕೆ ನಾಗರಹಾವೊಂದು ನುಗ್ಗಿ ಜಾನುವಾರುಗಳ ಮೇಲಿನ ಉಣ್ಣೆಗಳನ್ನು ನಿವಾರಿಸುವಂತಹ ವಿಷದ ಬಾಟಲಿಯನ್ನು ನುಂಗಿತ್ತು. ಈ ಕುರಿತು ಜಗದೀಶ್ ನೀರೆ ಎಂಬವರು ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು.
ಕೂಡಲೇ ಸ್ಥಳಕ್ಕೆ ತೆರಳಿದ ಗುರುರಾಜ್ ಸನಿಲ್, ಶೌಚಾಲಯದೊಳಗಿನ ಹೆಗ್ಗಣದ ಬಿಲಕ್ಕೆ ನುಗ್ಗಿದ ಹಾವನ್ನು ಹರಸಾಹಸ ಪಟ್ಟು ಹೊರಗೆ ತೆಗೆಯುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಹಿಡಿದು, ಅದರ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ತಳ್ಳುತ್ತ ಬಂದು ವಾಂತಿ ಮಾಡಿ ಹೊರಗೆ ತೆಗೆಯಲಾಯಿತು. ರಕ್ಷಣೆ ಮಾಡಿದ ಹಾವನ್ನು ಬಳಿಕ ಅಲ್ಲೇ ಸಮೀಪದ ಹಾಡಿಯಲ್ಲಿ ಬಿಡಲಾಯಿತು.
‘ಮನೆಯ ಹಟ್ಟಿಯನ್ನು ಹೊಕ್ಕ ಹಾವು ಕೋಳಿಯೊಂದನ್ನು ಕಚ್ಚಿ ಸಾಯಿಸಿ, ಪಕ್ಕದಲ್ಲಿ ಬಿದ್ದಿದ್ದ ವಿಷದ ಬಾಟಲಿಯು ಹಾವಿಗೆ ಬಾಯಿಗೆ ಸಿಕ್ಕಿ, ಹಾವು ಅದನ್ನೇ ಕೋಳಿ ಎಂದು ಭ್ರಮಿಸಿ ನುಂಗಿಬಿಟ್ಟಿತು’ ಎಂದು ಗುರುರಾಜ್ ಸನಿಲ್ ತಿಳಿಸಿದ್ದಾರೆ.
ಹಾವುಗಳಿಗೆ ಯಾವುದೇ ಜೀವಿ ಅಥವಾ ವಸ್ತುಗಳನ್ನು ಮನುಷ್ಯರ ಹಾಗೆ ನಿಖರವಾಗಿ ಗುರುತಿಸುವ ದೃಷ್ಟಿ ವ್ಯವಸ್ಥೆ ಇರುವುದಿಲ್ಲ. ಅದೇ ರೀತಿ ಇತರ ಪ್ರಾಣಿಗಳಂತೆ ಮೂಗಿನ ಮೂಲಕ ವಾಸನೆಯನ್ನು ಗ್ರಹಿಸಿ ಪತ್ತೆ ಹಚ್ಚುವ ಶಕ್ತಿಯೂ ಇಲ್ಲ. ಅವುಗಳ ಕಣ್ಣಗಳು ಜೀವಿಗಳ ಅಥವಾ ವಸ್ತುಗಳ ಓಡಾಟದ ಚಲನೆಯನ್ನು ಮಾತ್ರವೇ ಗ್ರಹಿಸಬಲ್ಲವು. ಉಳಿದಂತೆ ಅವುಗಳಿಗೆ ಸುತ್ತಲಿನ ಎಲ್ಲಾ ಆಗುಹೋಗುಗಳನ್ನು ತಿಳಿದುಕೊಳ್ಳಲು ಕೇವಲ ಸೀಳು ನಾಲಗೆಯೇ ಮುಖ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.