ಶ್ರೀಮಂತ ಸಂಸ್ಕೃತಿ, ಭವ್ಯ ಪರಂಪರೆಯ ಕರ್ನಾಟಕ: ಜಯನ್ ಮಲ್ಪೆ
ಮಲ್ಪೆ : ಶ್ರೀಮಂತ ಸಂಸ್ಕೃತಿ ಹಾಗೂ ಭವ್ಯ ಪರಂಪರೆಯ ಇತಿಹಾಸ ಹೊಂದಿರುವ ಕರ್ನಾಟಕ, ನಾಡಿನ ಜನತೆಗೆ ಗಂಧದ ಗುಡಿಯಿದ್ದಂತೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಇಂದು ಮಲ್ಪೆ ಕಡಲ ಕಿನಾರೆಯಲ್ಲಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವದ ಭುವನೇಶ್ವರಿಯ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯೋತ್ಸವ ಎಂಬುದು ಇಂದು ಒಂದು ವಾರ್ಷಿಕ ಜಾತ್ರೆಯಂತಾಗಿ ರುವುದು ವಿಪರ್ಯಾಸ. ನವೆಂಬರ್ ತಿಂಗಳು ಮುಗಿದ ಬಳಿಕ ನಾಡು ನುಡಿಯ ಕುರಿತು ನಾವು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದ ಜಯನ್ ಮಲ್ಪೆ ರಾಜ್ಯದಲ್ಲಿ ಕೋಮು ಸಾಮರಸ್ಯ, ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ಮಾತ್ರ ರಾಜ್ಯದ ಹಿತರಕ್ಷಣೆ ಸಾದ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಮಲ್ಪೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಮಾಜಿ ನಗರಸಭಾ ಸದಸ್ಯ ಪಾಡುರಂಗ ಮಲ್ಪೆ ಮಾತನಾಡಿ ಕನ್ನಡ ಅನ್ನ ನೀಡುವ ಭಾಷೆಯಾಗ ಬೇಕು ಮತ್ತು ರಾಜ್ಯದ ಐಟಿ-ಬಿಟಿ ಕಂಪೆನಿಗಳು ಕರ್ನಾಟಕದ ನೆಲ ಜಲವನ್ನು ಪ್ರೀತಿಸುವಂತಾಗಬೇಕು ಎಂದರು.
ನ್ಯಾಯವಾದಿ ಪ್ರವೀಣ್ ಪೂಜಾರಿ ಸಭೆಯನ್ನುದ್ದೇಸಿ ಮಾತನಾಡಿದರು. ವೇದಿಕೆಯಲ್ಲಿ ಸಮಾಜ ಸೇವಕ ಹಾಗೂ ಉದ್ಯಮಿ ಮಂಜು ಕೊಳ, ಚಂದ್ರಹಾಸ ಕಾಂಚನ್, ರಘರಾಜ್ ಬಂಗೇರ ಮತ್ತು ಅರುಣ್ ಬಂಗೇರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಾಣ ರಕ್ಷಕ ಈಶ್ವರ ಮಲ್ಪೆ, ವಿಶ್ವನಾಥ ಶೆಣೈ ಮತ್ತು ಹಿರಿಯ ರಿಕ್ಷಾ ಚಾಲಕ ಐತಪ್ಪ ಬಂಗೇರ ಇವರನ್ನು ಸನ್ಮಾನಿಸಲಾಯಿತು. ಹರೀಶ್ ಸಾಲ್ಯಾನ್ ಸ್ವಾಗತಿಸಿ, ಭಗವಾನ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ಕನ್ನಡ ಭುವನೇಶ್ವರಿ, ಕುವೆಂಪು, ಪುನೀತ್ ರಾಜ್‌ಕುಮಾರ್‌ರ ಟ್ಯಾಬ್ಲೋದೊಂದಿಗೆ ಸುಮಾರು 500 ಕ್ಕೂ ಹೆಚ್ಚು ರಿಕ್ಷಾಗಳ ಮೆರವಣಿಗೆ ಬೀಚ್‌ನಿಂದ ಹೊರಟು ಮಲ್ಪೆ ಸುತ್ತುಮುತ್ತ ಸಾಗಿ ಕಡಲ ಕಿನಾರೆಯಲ್ಲಿ ಸಮಾಪನಗೊಂಡಿತು.