ಕಟೀಲು: ಕಲಾವಿದರುಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ
ಉಡುಪಿ : ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ಶನಿವಾರ ಜರಗಿತು.
ಕಲಾವಿದರಾದ ಚಿದಂಬರಬಾಬು, ಕೋಟ ಗೋವಿಂದ ಉರಾಳ, ಮುಂಡ್ಕೂರು ವಸಂತ ಶೆಟ್ಟಿ, ತೀರ್ಥಹಳ್ಳಿ ಶಿವಶಂಕರ ಭಟ್, ಸಿದ್ದಾಪುರ ಸಂಜೀವ ಕೊಠಾರಿ, ಸೀತೂರು ಅನಂತಪದ್ಮನಾಭ ರಾವ್, ಕವ್ವಾಳೆ ಗಣಪತಿ ರಾಮಚಂದ್ರ ಭಾಗ್ವತ, ಮಂದಾರ್ತಿ ರಘುರಾಮ ಮಡಿವಾಳ, ಕೋಡಿ ವಿಶ್ವನಾಥ ಗಾಣಿಗ, ಸಿದ್ದಾಪುರ ಅಶೋಕ್ ಭಟ್, ಗುಣವಂತೆ ಸುಬ್ರಾಯ ನಾರಾಯಣ ಭಂಡಾರಿ, ಚೋರಾಡಿ ವಿಠಲ ಕುಲಾಲ್, ಎರ್ಮಾಳು ವಾಸುದೇವ ರಾವ್, ಈಚಲ ಕೊಪ್ಪ ಪ್ರಭಾಕರ ಹೆಗಡೆ, ಮಧೂರು ರಾಧಾಕೃಷ್ಣ ನಾವಡ, ಪಡುಬಿದ್ರೆ ರತ್ನಾಕರ ಆಚಾರ್ಯ, ಗುಂಡಿಮಜಲು ಗೋಪಾಲ ಭಟ್, ಇಡುವಾಣಿ ತ್ರ್ಯಂಬಕ ಹೆಗಡೆ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಕಾಯರ್ತ್ತಡ್ಕ ವಸಂತ ಗೌಡ, ಶ್ರೀಧರ ಪಂಜಾಜೆ ಸಹಿತ 21 ಕಲಾವಿದ ರಿಗೆ ತಲಾ 20 ಸಾವಿರ ರೂ. ನಗದು ಸಹಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀಸ್ವರ್ಣವಲ್ಲೀ ಮಠದ ಕೃಪಾಶ್ರಯದ ಯಕ್ಷಶಾಲ್ಮಲಾ ಸಂಸ್ಥೆಗೆ ಶ್ರೀವಿಶ್ವೇಶ ತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ೫೦ ಸಾವಿರ ರೂ. ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸೋಂದಾ ನಾಗರಾಜ ಜೋಶಿ ಪ್ರಶಸ್ತಿ ಸ್ವೀಕರಿಸಿದರು. ಯಕ್ಷಗಾನ ಕಲಾರಂಗದ ಹಿರಿಯ ಕಾರ್ಯಕರ್ತ ಮುದ್ರಾಡಿ ವಿಜಯಕುಮಾರ್‌ಗೆ ‘ಯಕ್ಷ ಚೇತನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇತ್ತೀಚಿಗೆ ನಿಧನರಾದ ಸಿಗಂಧೂರು ಮೇಳದ ಭಾಗವತ ರಾಮಚಂದ್ರ ಜಿ. ನಾಯ್ಕ್ ಅವರ ಪತ್ನಿ ಗೀತಾ ನಾಯ್ಕ್‌ಗೆ ೫೦ಸಾವಿರ ರೂ. ಸಾಂತ್ವನ ನಿಧಿ ನೀಡಲಾಯಿತು. ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಟೀಲು ದೇಗುಲದ ಅನುವಂಶಿಕ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ. ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಹಾಗೂ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.
ಸುವರ್ಣ ಪ್ರತಿಷ್ಠಾನದ ಪ್ರಭಾಕರ ಸುವರ್ಣ, ನಮ್ಮ ಕುಡ್ಲದ ಲೀಲಾಕ್ಷ ಬಿ. ಕರ್ಕೇರ, ಎಂ.ಕೆ.ಭಟ್ ಕಡತೋಕ, ಕೆ.ಸದಾಶಿವ ಭಟ್ ಮುಖ್ಯ ಅತಿಥಿಗಳಾಗಿ ದ್ದರು. ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯ ದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಪೂರ್ವದಲ್ಲಿ ’ಶಶಿಪ್ರಭಾ ಪರಿಣಯ’ ಬಡಗುತಿಟ್ಟು ಯಕ್ಷಗಾನ ಮತ್ತು ಬಳಿಕ ತೆಂಕು-ಬಡಗು- ಕರ್ನಾಟಕ ಶಾಸ್ತ್ರೀಯ ಸಂಗೀತ ಇವುಗಳ ’ರಾಗ ಸಂಯೋಗ’ ಮತ್ತು ತೆಂಕುತಿಟ್ಟು ಕಲಾವಿದರಿಂದ ‘ಶ್ರೀಮನೋಹರ ಸ್ವಾಮಿ ಪರಾಕು’ ಯಕ್ಷಗಾನ ರೂಪಕ ಪ್ರಸ್ತುತಗೊಂಡಿತು.