ಕೊಲ್ಲೂರು: ಪಾಳು ಬಾವಿಗೆ ಬಿದ್ದು ಅಪರಿಚಿತ ವ್ಯಕ್ತಿ ಮೃತ್ಯು
ಕೊಲ್ಲೂರು, ಆ.16: ಪಾಳುಬಿದ್ದ ಬಾವಿಗೆ ಬಿದ್ದು ಅಪರಿಚಿತ ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ಕೊಲ್ಲೂರಿನಲ್ಲಿ ಆ.14ರಂದು ನಡೆದಿದೆ.
ಘಟನೆ ವಿವರ: ಕೊಲ್ಲೂರು ಗ್ರಾಮದ ಅನ್ನಪೂರ್ಣ ವಸತಿಗೃಹ ಬಳಿಯ ಮನೆಯಲ್ಲಿ ಜೀಪು ತೊಳೆಯುತ್ತಿದ್ದ ಅಶೋಕ್ ಎನ್ನುವರಿಗೆ ವ್ಯಕ್ತಿಯೊಬ್ಬರು ಬೊಬ್ಬೆ ಹಾಕುವ ಸದ್ದು ಕೇಳಿದ್ದು ಅವರು ಹಾಗೂ ವಸತಿ ಗೃಹದಲ್ಲಿದ್ದ ಇತರರು ಟಾರ್ಚ್ ಬೆಳಕಿನಲ್ಲಿ ಹುಡುಕಾಡಿದಾಗ ಸಮೀಪದ ಪಾಳು ಬಿದ್ದ ಬಾವಿಯಲ್ಲಿ ವ್ಯಕ್ತಿಯೊಬ್ಬರು ಬಿದ್ದಿದ್ದು ಜೀವ ಉಳಿಸಿಕೊಳ್ಳಲು ಬಾವಿಯಲ್ಲಿರುವ ಗಿಡ ಬಳ್ಳಿಗಳನ್ನು ಕವಚಿಯಾಗಿ ಕೈಯಲ್ಲಿ ಹಿಡಿದುಕೊಂಡು ಸಹಾಯಕ್ಕಾಗಿ ಬೊಬ್ಬೆ ಹಾಕುತ್ತಿದ್ದರು.
ಅವರನ್ನು ಮೇಲಕ್ಕೆ ಎತ್ತಲು ಹಗ್ಗ ಇಳಿಸಿ ಯತ್ನಿಸಿದ್ದು ವ್ಯಕ್ತಿ ಕೈಯಿಂದ ಹಗ್ಗ ತಪ್ಪಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿದ್ದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಯವರು ಸ್ಥಳಕ್ಕೆ ಬಂದು ಹುಡುಕಾಡಿ ಬಾವಿಯ ನೀರಿನಿಂದ ಮೇಲಕ್ಕೆತ್ತಿದ್ದಾರೆ. ಸುಮಾರು 45ರಿಂದ 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಒಬ್ಬಂಟಿಯಾಗಿ ಕೊಲ್ಲೂರಿಗೆ ಬಂದು ಕತ್ತಲಲ್ಲಿ ದಾರಿ ತಪ್ಪಿ ಹಾಳು ಬಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೃತರ ಚಹರೆ: ಸಾಧಾರಣ ಮೈಕಟ್ಟು ಕೋಲು ಮುಖ. ಎಣ್ಣೆಕಪ್ಪು ಮೈ ಬಣ್ಣ, ಕಪ್ಪು-ಬಿಳಿ ಮಿಶ್ರಿತ ತಲೆ ಕೂದಲು, ಗಡ್ಡ ಮೀಸೆ, ಬಟ್ಟೆ ಬಣ್ಣ- ಕಪ್ಪು ಬಣ್ಣದ ಪ್ಯಾಂಟ್, ನೇರಳೆ-ಬಿಳಿ ಬಣ್ಣದ ಚೌಕುಳಿಯ ತುಂಬು ಅಂಗಿ ಧರಿಸಿದ್ದು ಮೂಗಿನ ಮೇಲ್ಬಾಗದಲ್ಲಿ ಕಪ್ಪು ಮಚ್ಚೆ ಇದೆ.
ಮೃತರ ವಾರಸುದಾರರು ಇದ್ದಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:08254-258233 , 9480805460, ಬೈಂದೂರು ವೃತ್ತ ಕಚೇರಿ: 08254 - 251031, ಪೊಲೀಸ್ ಕಂಟ್ರೋಲ್ ರೂಮ್ : 100 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.