ಕೋಟ: ರೆಸಾರ್ಟ್ ನ ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು ಮಗು ಮೃತ್ಯು
ಕೋಟ, ನ.22: ಮನೆ ಸಮೀಪದ ರೆಸಾರ್ಟ್ ವೊಂದರ ಸ್ಲೈಡಿಂಗ್ ಗೇಟ್ ಆಕಸ್ಮಿಕವಾಗಿ ಕಳಚಿ ಮೈಮೇಲೆ ಬಿದ್ದು ಮಗುವೊಂದು ಮೃತಪಟ್ಟ ಘಟನೆ ನ.21ರಂದು ಸಂಜೆ ವೇಳೆ ಕೋಟತಟ್ಟು ಎಂಬಲ್ಲಿ ನಡೆದಿದೆ.
ಕಟಪಾಡಿಯ ಸುಧೀರ್ ಎಂಬವರ ಪುತ್ರ ಸುಶಾಂತ್ (3) ಮೃತ ಮಗು. ಸುಧೀರ್ 10 ದಿನಗಳ ಹಿಂದೆ ತನ್ನ ಪತ್ನಿ ಮನೆಯಾದ ಕೋಟತಟ್ಟುವಿಗೆ ಬಂದಿದ್ದು, ಅಲ್ಲಿ ಮನೆ ಹತ್ತಿರದಲ್ಲಿರುವ ಪೃಥ್ವಿರಾಜ್ ಎಂಬವರ ರೆಸಾರ್ಟ್ ಎದುರಿನ ಗೇಟ್ ಬಳಿ ಪಕ್ಕದ ಮನೆಯ ಹುಡುಗರೊಂದಿಗೆ ಸುಶಾಂತ್ ಆಡುತ್ತಿದ್ದನು. ಈ ವೇಳೆ ರೆಸಾರ್ಟ್ ನ ಸ್ಲೈಡಿಂಗ್ ಗೇಟ್ ಕಳಚಿ ಮಗು ಮೈಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಗು ಕೋಟ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿತ್ತೆಂದು ತಿಳಿದು ಬಂದಿದೆ.
ಈ ಘಟನೆಗೆ ರೆಸಾರ್ಟ್ ಗೇಟನ್ನು ಸರಿಯಾಗಿ ಜೋಡಣೆ ಮಾಡದೇ ಗೇಟನ್ನು ಸುಸ್ಥಿತಿಯಲ್ಲಿಡದೇ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ತೋರಿದ್ದಾರೆ ಎಂದು ರೆಸಾರ್ಟ್ ಮಾಲಕ ಪೃಥ್ವಿರಾಜ್ ಹಾಗೂ ಸಂಬಂಧಪಟ್ಟವರು ಕಾರಣವಾಗಿದ್ದಾರೆಂದು ಮೃತ ಮಗುವಿನ ತಂದೆ ಸುಧೀರ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.