ಕೆಎಸ್‌ಸಿಎ ಅಂಡರ್ 19 ಕ್ರಿಕೆಟ್: ಮಂಗಳೂರು ವಲಯ ಚಾಂಪಿಯನ್
ಉಡುಪಿ, ಆ.13: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ 19ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳೂರು ವಲಯ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಮಂಗಳೂರು ವಲಯ ತಂಡ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯ ಗಳನ್ನು ಗೆದ್ದುಕೊಂಡು 16 ಅಂಕ ಗಳಿಸಿತ್ತು. ಅದು ರಾಯಚೂರು ವಲಯವನ್ನು 4 ವಿಕೆಟ್‌ಗಳ ಅಂತರದಿಂದ, ಧಾರವಾಡ ವಲಯವನ್ನು 2 ವಿಕೆಟ್‌ಗಳ ಅಂತರದಿಂದ, ತುಮ ಕೂರು ವಲಯವನ್ನು 7 ವಿಕೆಟ್‌ಗಳ ಅಂತರದಿಂದ ಹಾಗೂ ಶಿವಮೊಗ್ಗ ವಲಯವನ್ನು 72 ರನ್‌ಗಳ ಅಂತರದಿಂದ ಸೋಲಿಸಿದರೆ, ಮೈಸೂರು ವಲಯದ ವಿರುದ್ದ _98 ರನ್‌ಗಳ ಪರಾಭವ ಅನುಭವಿಸಿತ್ತು.
ತಂಡದ ನಾಯಕ ಆಶೀಷ್ ನಾಯಕ್ ಒಟ್ಟು 11 ವಿಕೆಟ್ ಗಳಿಸಿದ್ದಲ್ಲದೇ 88 ರನ್‌ಗಳನ್ನು ಗಳಿಸಿದರು. ಜಯರಾಜ್ ಮುತ್ತು ತಂಡದ ಕೋಚ್ ಮತ್ತು ಉದಯ ಕಟಪಾಡಿ ತಂಡದ ಮ್ಯಾನೇಜರ್ ಆಗಿದ್ದರು.
ವಿಜಯಿ ತಂಡದ ಸದಸ್ಯರು: ಆಶೀಷ್ ನಾಯಕ್ (ನಾಯಕ), ನಿಶ್ಚಿತ್ ಪೈ, ಪವನ್ ಮಡಿವಾಳ್, ನಿಖಿಲ್ ಐತಾಳ್, ರಿಷಬ್ ನಾಯಕ್ (ವಿಕೆಟ್‌ಕೀಪರ್), ಅಕ್ಷಯ್ ಕಾಮತ್ (ಎಲ್ಲರೂ ಉಡುಪಿ ಜಿಲ್ಲೆ), ರೋಹನ್ ರೇವಣ್ಕರ್, ಆದಿತ್ಯ ಕೋಟ್ಯಾನ್, ವಿರಾಲ್ ಕೋಟ್ಯಾನ್, ಅಮೃತ್ ಪ್ರವೀಣ್, ಅಡೇನ್ ಮಾರ್ಕ್ ಡಿಸೋಜ, ನಿಹಾಂಶ್, ಗಗನ್ ರಾವ್, ಪ್ರಥಮ್ (ಎಲ್ಲರೂ ದಕ್ಷಿಣ ಕನ್ನಡ ಜಿಲ್ಲೆ) ಹಾಗೂ ಶಾಶ್ವಿತ್ ಸೋಮಣ್ಣ (ಕೊಡಗು ಜಿಲ್ಲೆ).