ಕುಮಾರ ಬಂಗಾರಪ್ಪ ಕಾಂಗ್ರೆಸ್‌ಗೆ ಹೋಗಲ್ಲ: ಸಂಸದ ಬಿ.ವೈ ರಾಘವೇಂದ್ರ
ಕುಂದಾಪುರ: ಕುಮಾರ ಬಂಗಾರಪ್ಪ ಕಾಂಗ್ರೆಸ್ ಸೇರಿ ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗುತ್ತಾರೆ ಎಂಬುದು ಸುಳ್ಳು ಸುದ್ದಿ. ಅವರು ಸಂಘಟನೆಯ ಹಿರಿಯರ ಜೊತೆ ಚರ್ಚೆಯಲ್ಲಿದ್ದಾರೆ. ಸಿನೆಮಾ ಕ್ಷೇತ್ರ ಸಹಿತ ಬೇರೆ ಬೇರೆ ಕಾರಣದ ಬದ್ಧತೆಗಳನ್ನು ಮುಗಿಸಿಕೊಂಡು ಮತ್ತೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗುತ್ತಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಸೋಮವಾರ ಹೆಮ್ಮಾಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಕೊರತೆ ಇರಲಾರದು ಎಂದರು.
ಬಸವನಗೌಡ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದ್ದು ಕರೆಸಿ ಮಾತನಾಡುವ ಕೆಲಸ ಮಾಡಲಿದ್ದಾರೆ. ಮಾಡಿರುವ ಆರೋಪಗಳಿಗೆಲ್ಲ ಪಕ್ಷವೇ ಆದಷ್ಟು ಬೇಗ ಉತ್ತರ ಕೊಡಲಿದೆ ಎಂದರು.
ಪ್ರಧಾನಿ ಮೋದಿ ಬಗ್ಗೆ ಮಾಲ್ಡಿವ್ಸ್‌ನ ಸಚಿವರು ಟೀಕೆ ಮಾಡಿದ್ದಕ್ಕೆ ಅಲ್ಲಿನ ಸರಕಾರವೇ ಅವರನ್ನು ವಜಾ ಮಾಡಿದೆ. ಇದು ನಮ್ಮ ಪ್ರಧಾನಿ ಬಗ್ಗೆ ವಿಶ್ವದೆಲ್ಲೆಡೆ ಇರುವಂತಹ ಅಭಿಮಾನಕ್ಕೆ ಸಾಕ್ಷಿ. ನಾವು ಮಾಡಿರುವಂತಹ ಕೆಲಸವನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ, ಆ ಮೂಲಕ ಜನರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತೇವೆ. ಎಲ್ಲ ಶಾಸಕರ ಸಹಕಾರದಿಂದ ಉತ್ತಮ ಕಾರ್ಯ ಮಾಡುತ್ತಿದ್ದೇವೆ. ಸಂಘಟನೆ ಅವಕಾಶ ಕೊಟ್ಟರೆ ಖಂಡಿತ ಮತ್ತೊಮ್ಮೆ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವಿದೆ ಎಂದರು.
ಜ.22 ಕ್ಕೆ ದೇಶದ ಕೋಟ್ಯಾಂತರ ಜನರ ಕನಸು ನನಸಾಗಲಿದೆ. ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಈ ಕಡೆಯಿಂದ ನೇರ ರೈಲು ವ್ಯವಸ್ಥೆ ಕಲ್ಪಿಸುವ ಬಗ್ಗೆ ಪ್ರಯತ್ನಿಸಲಾಗುವುದು. ದೇಶದ ಎಲ್ಲ ಕಡೆಯಿಂದಲೂ ರಸ್ತೆ, ವಿಮಾನ, ರೈಲು ಸಂಪರ್ಕ ಕುರಿತಂತೆ ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಲಿದೆ. ಮುಂಬಯಿಗೆ ವಂದೇ ಭಾರತ್ ರೈಲು ಸಂಪರ್ಕಕಕ್ಕೆ ಮುಂದಿನ ಬಾರಿ ಖಂಡಿತ ಪ್ರಯತ್ನಿಸುವೆ. ಸೇನಾಪುರ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಕುರಿತು ಸಂಬಂಧಪಟ್ಟ ಕೇಂದ್ರದ ಅಧಿಕಾರಿಗಳ ಬಳಿಯೂ ಮಾತನಾಡಿದ್ದೇನೆ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮೊದಲಾದವರು ಉಪಸ್ಥಿತರಿದ್ದರು.