ಕುಂದಾಪುರ: ಅಂಬೇಡ್ಕರ್ ವಸತಿ ಶಾಲೆ, ಮೋವಾಡಿ ಕಳಪೆ ಕಾಮಗಾರಿ ರಸ್ತೆ ಪರಿಶೀಲನೆ
’ವಾರ್ತಾಭಾರತಿ’ಯ ವರದಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸ್ಪಂದನೆ
ಕುಂದಾಪುರ: ತ್ರಾಸಿ ಗ್ರಾಪಂ ವ್ಯಾಪ್ತಿಯ ಮೋವಾಡಿ ಶಾಲಾ ಸಮೀಪದ ದಲಿತ ಕಾಲನಿಯ ಕಾಂಕ್ರಿಟ್ ರಸ್ತೆಯು ನಿರ್ಮಾಣ ಗೊಂಡ 4-5 ತಿಂಗಳಿನಲ್ಲೇ ಕಿತ್ತುಹೋಗಿದ್ದು, ಈ ಬಗ್ಗೆ ಆ.16ರಂದು ‘ವಾರ್ತಾಭಾರತಿ’ ಪತ್ರಿಕೆ ’ನಾಲ್ಕೇ ತಿಂಗಳಲ್ಲಿ ಕಿತ್ತುಹೋದ ದಲಿತ ಕಾಲನಿಯ ಕಾಂಕ್ರಿಟ್ ರಸ್ತೆ!’ ಎಂಬ ತಲೆಬರಹದಡಿ ಸಚಿತ್ರ ವರದಿ ಪ್ರಕಟಿಸಿತ್ತು.
ವರದಿಗೆ ಸ್ಪಂದಿಸಿರುವ ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಕಚೇರಿ ಅಧೀಕ್ಷಕ ರಮೇಶ್ ಇಂದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ಗುರುರಾಜ್ ಹಾಜರಿದ್ದರು. ಗುತ್ತಿಗೆ ದಾರರು ಕಳಪೆ ಕಾಮಗಾರಿ ನಡೆಸಿದ ಕುರಿತು ಅಧಿಕಾರಿಗಳ ಬಳಿ ಸ್ಥಳೀಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು 20ಲಕ್ಷ ರೂ. ವೆಚ್ಚದಲ್ಲಿ ಉಡುಪಿ ನಿರ್ಮೀತಿ ಕೇಂದ್ರದಿಂದ 261 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ವರ್ಷ ಮಳೆಗಾಲದ ಆರಂಭದಲ್ಲೇ ಎರಡು ಕಡೆಗಳಲ್ಲಿ ಜಲ್ಲಿಕಲ್ಲುಗಳು ಮೇಲೆದ್ದು ಬಂದಿದ್ದು ಒಂದರೆರಡು ಕಡೆಗಳಲ್ಲಿ ರಸ್ತೆ ಬಿರುಕು ಬಿಟ್ಟಿದೆ.
‘ಕಲ್ಯಾಣ ಕೇಂದ್ರದಿಂದ ಬಂದ ದೂರಿನಂತೆ ಮೋವಾಡಿಯ ದಲಿತ ಕಾಲನಿ ರಸ್ತೆ ಸಮಸ್ಯೆ ಸ್ಥಳಕ್ಕೆ ಭೇಟಿ ನೀಡಲಾಗಿದೆ. 20 ಮೀಟರ್ ಜೆಲ್ಲಿ ಕಲ್ಲುಗಳು ಮೇಲೆದ್ದಿದೆ. ಬಹಳಷ್ಟು ಮಳೆಯಿಂದ ಹೀಗಾಗಿದೆ ಎಂದು ಇಂಜಿನಿಯರ್ ಹೇಳಿದ್ದಾರೆ. ರಸ್ತೆಗೆ ತೇಪೆ ಹಾಕುವ ಬದಲು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾನಿಯಾದ 20ಮೀ. ಹಳೆ ರಸ್ತೆ ತೆಗೆದು ಹೊಸ ಕಾಂಕ್ರಿಟ್ ರಸ್ತೆ ನಿರ್ಮಿಸಲು ಸಂಬಂಧಪಟ್ಟ ನಿರ್ಮೀತಿ ಇಂಜಿನಿಯರ್‌ಗೆ ತಿಳಿಸಲಾಗಿದೆ. ಅದರಂತೆ ಸೋಮವಾರದಿಂದ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ’ -ರಾಘವೇಂದ್ರ ವರ್ಣೇಕರ್, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ
ಅಂಬೇಡ್ಕರ್ ಮಾದರಿ ವಸತಿ ಶಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
ಕುಂದಾಪುರ ತಾಲೂಕಿನ ಶಂಕರನಾರಾಯಣದ ಸೌಡ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮಾದರಿ ವಸತಿ ಶಾಲೆ ಕಟ್ಟಡಗಳ ಮೇಲ್ಭಾಗದಲ್ಲಿ ಗುಡ್ಡ ಜರಿತವಾಗುತ್ತಿರುವುದು ಕಂಡು ಬರುತ್ತಿದ್ದು ’ವಾರ್ತಾಭಾರತಿ’ ಯಲ್ಲಿ ಈ ಕುರಿತು ಶುಕ್ರವಾರ ವಿಸ್ತ್ರತ ವರದಿ ಪ್ರಕಟವಾಗಿತ್ತು.
ಅಪಾಯಕಾರಿ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಶಾಲೆಯ ಸ್ಥಳಕ್ಕೆ ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಕಚೇರಿ ಅಧೀಕ್ಷಕ ರಮೇಶ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ ದರು. ಈ ವೇಳೆ ಕಾಮಗಾರಿ ನಿರ್ವಹಿಸುತ್ತಿರುವ ಕ್ರೈಸ್ ಸಂಸ್ಥೆಯ ಇಂಜಿನಿಯರ್ ಅಕ್ಷಯ್, ಸೈಟ್ ಇಂಜಿನಿಯರ್ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ರಾಘವೇಂದ್ರ ವರ್ಣೇಕರ್, ಕಳೆದ ತಿಂಗಳು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರೊಂದಿಗೆ ವಸತಿ ಶಾಲೆ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿದ್ದು ಆಗಲೇ ಇಲ್ಲಿನ ವಿಚಾರದ ಬಗ್ಗೆ ಕಾಮಗಾರಿ ನಿರ್ವಹಿಸುತ್ತಿ ರುವ ಕ್ರೈಸ್ ಸಂಸ್ಥೆಯವರಲ್ಲಿ ತಾಂತ್ರಿಕ ಗುಣಮಟ್ಟ ಹಾಗೂ ತಡೆಗೋಡೆ ನಿರ್ಮಾಣ ವಿಚಾರದ ಬಗ್ಗೆ ಪತ್ರ ಬರೆಯಲಾಗಿತ್ತು. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಇನ್ನೊಂದು ವರದಿಯನ್ನು ಮೇಲಾಧಿಕಾರಿಗಳು ಮತ್ತು ಸಂಬಂದ ಪಟ್ಟವರಿಗೆ ನೀಡುತ್ತೇವೆ. ಅಲ್ಲದೆ ಸೋಮವಾರ ಕ್ರೈಸ್ ಸಂಸ್ಥೆ ಮುಖ್ಯ ಎಂಜಿನಿಯರ್, ತಾಂತ್ರಿಕ ವಿಭಾಗದವರು ಭೇಟಿ ನೀಡಲಿದ್ದಾರೆ ಎಂದರು.