ಕುಂದಾಪುರ| ದಸಂಸ ಮುಖಂಡನಿಗೆ ಕೊಲೆ ಬೆದರಿಕೆ ಪ್ರಕರಣ: ಆರೋಪಿ ಬಂಧನ
ಕುಂದಾಪುರ: ದಲಿತ ಮುಖಂಡ ಕೆ.ಸಿ ರಾಜು ಬೆಟ್ಟಿನಮನೆ ಎಂಬವರಿಗೆ ಕುಂದಾಪುರ ತಹಶೀಲ್ದಾರ್ ಕಚೇರಿಯ ಎದುರೆ ಅವ್ಯಾಚವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಕ್ವಾಡಿ ಸಂಪತ್ ಕುಮಾರ್ ಶೆಟ್ಟಿ ಬಂಧಿತ ಆರೋಪಿ.
ಘಟನೆ ಹಿನ್ನೆಲೆ: ದಲಿತ ಮುಖಂಡ ಕೆ.ಸಿ ರಾಜು ಅವರು ಸೆ.19ರಂದು ಕುಂದಾಪುರ ತಾಲೂಕು ತಹಶೀಲ್ದಾರರ ಕಚೇರಿಯ ಹೊರಗಡೆ ಕುಳಿತುಕೊಂಡಿದ್ದು ಅಲ್ಲಿಗೆ ಬಂದ ಆರೋಪಿ ವಕ್ವಾಡಿ ಸಂಪತ್ ಕುಮಾರ್ ಶೆಟ್ಟಿ ಏಕಾಏಕಿ ಅವ್ಯಾಚವಾಗಿ ಬೈದು 'ನಾನು ಸರಕಾರಿ ಭೂಮಿ ಅಕ್ರಮ ಮಾಡಿರುವುದರ ವಿರುದ್ಧ ನೀನು ತಹಶೀಲ್ದಾರರಿಗೆ ದೂರು ನೀಡಿರುತ್ತೀಯಾ' ಎಂದು ತಗಾದೆ ತೆಗೆದಿದ್ದು ಈ ವೇಳೆ ರಾಜು ಅವರು 'ಸ್ವಲ್ಪ ಗೌರವದಿಂದ ಮಾತನಾಡಿ ಇದು ಸರಕಾರಿ ಕಚೇರಿ' ಎಂದು ಹೇಳಿದಾಗ ಆರೋಪಿ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ಸಂಘಟನೆ ಬಗ್ಗೆ ನಿಂದಿಸಿದ್ದಲ್ಲದೆ ತಳ್ಳಿದ್ದಾರೆ. ಸಾರ್ವಜನಿಕರು ಪರಿಸ್ಥಿತಿ ತಿಳಿಗೊಳಿಸಿದ್ದು ಈ ವೇಳೆ ಲಾರಿ ಹತ್ತಿಸಿ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆ ಸಹಿತ ನೂತನ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.