ಕುಂದಾಪುರ: ಕಾವರಾಡಿ ಗ್ರಾಪಂ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
ಕುಂದಾಪುರ, ನ.10: ಬಸವ ವಸತಿ ಯೋಜನೆಗೆ ಸಂಬಂಧಿಸಿ ಲಂಚ ಸ್ವೀಕರಿಸುತ್ತಿದ್ದ ಕಾವರಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯನ್ನು ಉಡುಪಿ ಲೋಕಾಯುಕ್ತ ಪೊಲೀಸರು ಇಂದು ಬಂಧಿಸಿದ್ದಾರೆ.
ಕಾವರಾಡಿ ಗ್ರಾಪಂ ಕಾರ್ಯದರ್ಶಿ ಗೋಪಾಲ ದೇವಾಡಿಗ ಬಂಧಿತ ಆರೋಪಿ.
ಕಾವರಾಡಿಯ ಜಾವೆದ್ ಎಂಬವರು ಬಸವ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಗೋಪಾಲ ದೇವಾಡಿಗ 15ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಲಂಚ ನೀಡಲು ಇಷ್ಟ ಇಲ್ಲದ ಜಾವೇದ್ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು.
ಅದರಂತೆ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ಜಾವೇದ್ ಅವರಿಂದ 15ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಕಾರ್ಯದರ್ಶಿಯನ್ನು ವಶಕ್ಕೆ ಪಡೆದುಕೊಂಡರು.
ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಹಾಗೂ ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರಾಘವೇಂದ್ರ, ಮಲ್ಲಿಕಾ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸುಧೀರ್, ಸತೀಶ್ ಆಚಾರ್ಯ ಈ ಕಾರ್ಯಾ ಚರಣೆ ನಡೆಸಿದ್ದರು.