ಕುಂದಾಪುರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ಬ್ಯಾರೀಸ್ ಪಿಯು ಕಾಲೇಜು ತಂಡ ಪ್ರಥಮ
ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಮತ್ತು ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕೋಡಿ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಬ್ಯಾರೀಸ್ ಕ್ರೀಡಾಂಗಣದಲ್ಲಿ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಬಾಲಕ - ಬಾಲಕಿಯರ ವಾಲಿಬಾಲ್ ಪಂದ್ಯಾಟ ನೆರವೇರಿತು.
ಪಂದ್ಯಾಟವನ್ನು ಉದ್ಘಾಟಿಸಿದ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಸುದೀಪ್ ಶೆಟ್ಟಿ "ವಿದ್ಯಾರ್ಥಿಯೊಬ್ಬನ ಸದೃಢ ಭವಿಷ್ಯಕ್ಕೆ ಪಠ್ಯದೊಂದಿಗೆ ಕ್ರೀಡೆಯೂ ಅತೀ ಅಗತ್ಯ, ಆರೋಗ್ಯದಾಯಕ ಸ್ಪರ್ಧೆಯೊಂದಿಗೆ ಆಡಬೇಕು, ಗೆಲುವಿಗಿಂತ ಸ್ಪರ್ಧೆ ಮುಖ್ಯ "ಎಂದು ನುಡಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪಂದ್ಯಾಟದಲ್ಲಿ ತಾಲೂಕಿನ 18 ಬಾಲಕರ ತಂಡ ಹಾಗೂ 12 ಬಾಲಕಿಯರ ತಂಡಗಳು ಸ್ಪರ್ಧಾತ್ಮಕ ಆಟದೊಂದಿಗೆ ಕ್ರೀಡಾಭಿಮಾನಿಗಳ ಮನಸೂರೆಗೊಂಡು ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿತು.
ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆಯಿತು. ಅದೇ ರೀತಿ ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡು, ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಈ ಸಂದರ್ಭ ವಿಶೇಷ ಸಾಧಕ ಕ್ರೀಡಾಪಟುಗಳನ್ನು ಗುರುತಿಸಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ. ಆಸೀಫ್, ಸಂಯೋಜಕ ಪ್ರೋ. ಆಕಾಶ್ , ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ಶೆಟ್ಟಿ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು, ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಕ್ರೀಡಾ ಸಂಯೋಜಕರಾದ ರಾಮ ಶೆಟ್ಟಿ, ಭಂಡಾರ್ ಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರನಾರಾಯಣ, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ದೈಹಿಕ ಶಿಕ್ಷಣ ಶಿಕ್ಷಕಿ ವೀಣಾ, ಬ್ಯಾರೀಸ್ ಪಿಯು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಕ್ಷತ್ ಉಪಸ್ಥಿತರಿದ್ದರು.
ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಸ್ಮಾರಕ ಕನ್ನಡ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮೊಹಮ್ಮದ್ ಇಲ್ಯಾಸ್ ವಂದಿಸಿ, ಬ್ಯಾರೀಸ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ಶೆಟ್ಟಿ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಡಾ. ಸಂದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.