ಕುಂದಾಪುರ: ವೀರಯೋಧ ಅನೂಪ್‌ಗೆ ಸಾವಿರಾರು ಮಂದಿಯಿಂದ ಭಾವಪೂರ್ಣ ವಿದಾಯ
ಕುಂದಾಪುರ: ಡಿ.24ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ವಾಹನ ರಸ್ತೆಯಿಂದ ಕಣಿವೆಗೆ ಉರುಳಿದ ಘಟನೆಯಲ್ಲಿ ಮೃತಪಟ್ಟ ಯೋಧ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯ ಅನೂಪ್ ಪೂಜಾರಿ (33) ಅಂತ್ಯಸಂಸ್ಕಾರ ಇಂದು ಹುಟ್ಟೂರಿನಲ್ಲಿ ನಡೆದಿದ್ದು, ಕುಟುಂಬಿಕರು ಸೇರಿದಂತೆ ನೆರೆದ ಸಾವಿರಾರು ಮಂದಿ ವೀರಯೋಧನಿಗೆ ಭಾವಪೂರ್ಣ ವಿದಾಯ ಹೇಳಿದರು.
ಇದಕ್ಕೂ ಮುನ್ನ ನಡೆದ ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದು ಊರಿನ ವೀರಯೋಧನಿಗೆ ಕಣ್ಣೀರಿನೊಂದಿಗೆ ಅಂತಿಮ ನಮನ ಸಲ್ಲಿಸಿದರು. ಅಂತಿಮ ಯಾತ್ರೆಯ ಮಾರ್ಗದುದ್ದಕ್ಕೂ ನೆರೆದ ಜನ ಪುಷ್ಪಾರ್ಚನೆ ಮಾಡಿದರು.
ಅನೂಪ್‌ರ ಪಾರ್ಥಿವ ಶರೀರ ಡಿ.26ರ ಬೆಳಗ್ಗೆ ಗುರುವಾರ ಹುಟ್ಟೂರು ಬೀಜಾಡಿಗೆ ಆಗಮಿಸಿದ್ದು ಸಹಸ್ರಾರು ಮಂದಿ ಅಂತಿಮ ದರ್ಶನ ಪಡೆದರು. ಗುರುವಾರ ಬೆಳಗಿನ ಜಾವ 1:15ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾರ್ಥಿವ ಶರೀರವನ್ನು ಸೇನಾ ಅಧಿಕಾರಿಗಳು ಕುಟುಂಬದವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಮೃತದೇಹವನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕೊಂಡೊಯ್ದು ಇರಿಸಲಾಗಿತ್ತು. ಬೆಳಿಗ್ಗೆ 8 ಗಂಟೆ ಬಳಿಕ ಹೂಗಳಿಂದ ಅಲಂಕೃತ ಅಂಬುಲೆನ್ಸ್‌ನಲ್ಲಿ ಉಡುಪಿಯಿಂದ ತೆಕ್ಕಟ್ಟೆಗೆ ಕರೆತರಲಾಯಿತು.
ಅಂತಿಮ ದರ್ಶನ ಪಡೆದ ನಾಗರಿಕರು: ಪಾರ್ಥಿವ ಶರೀರ ಆಗಮಿಸುವ ಮಾರ್ಗ ಮದ್ಯೆ ಬ್ರಹ್ಮಾವರ, ಸಾಸ್ತಾನ ಟೋಲ್ ಗೇಟ್, ಅನೂಪ್ ಕಲಿತ ಕೋಟ ವಿವೇಕ ಶಾಲೆ ಎದುರು, ಕೋಟ ಅಮೃತೇಶ್ವರಿ ದೇವಸ್ಥಾನದ ಎದುರು ಜಮಾಯಿಸಿದ ಜನರು ’ಅನೂಪ್ ಅಮರ್ ರಹೇ’, ‘ಭಾರತ ಮಾತಾಕಿ ಜೈ’ ಎಂದು ಪುಷ್ಪಾರ್ಚನೆ ಮಾಡಿ ಅಂತಿಮ ದರ್ಶನ ಪಡೆದರು. ಬಳಿಕ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಹಸ್ರಾರು ಮಂದಿ ನೆರೆದು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು.
ತೆಕ್ಕಟ್ಟೆಯಿಂದ ಕೋಟೇಶ್ವರ ಮಾರ್ಗವಾಗಿ ವಾಹನ ಜಾಥಾ ಮೂಲಕ ಸಾಗಿ ಬೀಜಾಡಿ ನಿವಾಸಕ್ಕೆ ಕರೆತರಲಾಯಿತು. ಮುಂಬದಿ ಪೊಲೀಸ್ ಎಸ್ಕಾರ್ಟ್ ವಾಹನ, ಹಿಂದೆ ಪಾರ್ಥಿವ ಶರೀರವಿದ್ದ ಅಂಬುಲೆನ್ಸ್, ಸೈನ್ಯದ ವಾಹನಗಳು, ಅಂಬುಲೆನ್ಸ್ ಸಹಿತ ಇತರ ಸರಕಾರಿ ಹಾಗೂ ಖಾಸಗಿ ವಾಹನಗಳಿತ್ತು. ಗಂಗೊಳ್ಳಿ 24X7 ಅಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡದವರು ಅಲ್ಲಲ್ಲಿ ಸಂಚಾರ ದಟ್ಟಣೆ ತಡೆಯುವಲ್ಲಿ ಶ್ರಮವಹಿಸಿದರು. ಉಡುಪಿ, ಕುಂದಾಪುರ, ಬ್ರಹ್ಮಾವರ, ಕೋಟೇಶ್ವರ, ತೆಕ್ಕಟ್ಟೆ ಸೇರಿದಂತೆ ಜಿಲ್ಲೆಯ ವಿವಿದೆಡೆಗಳಿಂದ ಆಗಮಿಸಿದ ನಾಗರಿಕರು ಸ್ವಯಂಸೇವಕರಂತೆ ಕಾರ್ಯ ನಿರ್ವಹಿಸಿದರು.
ಮನೆಯಲ್ಲಿ ವಿಧಿವಿದಾನ: ಪಾರ್ಥಿವ ಶರೀರ ಮನೆಗೆ ಆಗಮಿಸುತ್ತಿ ದ್ದಂತೆಯೇ ಅನೂಪ್ ತಾಯಿ ಚಂದುಪೂಜಾರಿ, ಪತ್ನಿ ಮಂಜುಶ್ರೀ, ಸಹೋದರಿಯರು ಸೇರಿದಂತೆ ಕುಟುಂಬಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಮನೆಯಲ್ಲಿ ವಿಧಿವಿಧಾನ ಗಳನ್ನು ನೆರವೇರಿಸಿದ ಬಳಿಕ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕೆ.ಟಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು. ಮನೆಯಿಂದ ಅನತಿ ದೂರದಲ್ಲಿರುವ ಅನೂಪ್ ಕಲಿತ ಶಾಲೆಗೆ ಮೃತದೇಹ ಕೊಂಡೊಯ್ದು ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಸುಮಾರು ಮೂರು ಗಂಟೆಗೂ ಅಧಿಕ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಸೇನೆಯ 21 ಬೆಟಾಲಿಯನ್ ಕರ್ನಲ್ ಗುರುವಿಂದರ್ ಸಿಂಗ್, ಎನ್.ಕೆ. ಸುಬೇದಾರ್ ಶಂಕರಗೌಡ ಪಾಟೀಲ್, ಹವಲ್ದಾರ್ ಸಂತೋಷ್, ಸಿಪಾಯಿ ಆಂಜನೇಯ ಪಾಟೀಲ್, ನಿವೃತ್ತ ಯೋಧ ರವಿ ಶೆಟ್ಟಿ ಇತರರು ಇದ್ದರು.
ಮನೆ ಸಮೀಪದ ಸಮುದ್ರ ತೀರದ ಜಾಗದಲ್ಲಿ ಅಂತಿಮ ನಮನ ಸಲ್ಲಿಸಿ ಸೇನೆಯ ಗೌರವ ವಂದನೆ ನೀಡಿ, ಸೇನೆಯ ಅಧಿಕಾರಿಗಳು ಅನೂಪ್ ಪೂಜಾರಿ ಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಸಾವಿರಾರು ಜನರ ಉಪಸ್ಥಿತಿಯಲ್ಲಿ ಅಪರಾಹ್ನ 2:45ಕ್ಕೆ ಚಿತೆಗೆ ಅಗ್ನಿ ಸ್ಪರ್ಶಮಾಡಲಾಯಿತು.
‘2 ವರ್ಷ ಜಮ್ಮುಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದರು. ಹಿಮಾಚಲ ಪ್ರದೇಶ ಕ್ವಾಟ್ರರ್ಸ್‌ನಲ್ಲಿ ಇದ್ದೆವು. ನಂತರ ಪೂಂಚ್ ಅಟ್ಯಾಕ್ ಆಗಿದ್ದು ಇವರಿದ್ದ ತಂಡ ಅಲ್ಲಿಗೆ ತೆರಳಿತ್ತು. ಒಂದೂವರೆ ವರ್ಷದಿಂದ ಅಲ್ಲೇ ಇದ್ದರು. ಕೆಲವೇ ತಿಂಗಳಿನಲ್ಲಿ ಈ ಸೇನಾ ತಂಡ ಗುಜರಾತಿಗೆ ತೆರಳುವುದಿತ್ತು. ಮತ್ತೆ ಅಲ್ಲಿ ದಾಳಿಯಾಗಿದ್ದರಿಂದ ಅಲ್ಲೆ ಉಳಿದಿದ್ದರು. ಸ್ವಲ್ಪ ಸಮಯ ಸಿಕ್ಕರು ಕರೆ ಮಾಡಿ ವಿಚಾರಿಸುತ್ತಿದ್ದರು. ಮಂಗಳವಾರ ಇಡೀ ದಿನ ಅವರು ಕರೆ ಮಾಡಿರಲಿಲ್ಲ. ನಾನು ಕರೆ ಮಾಡಿದ್ದರೂ ಸ್ವೀಕರಿಸಿರಲಿಲ್ಲ. ಸುದ್ದಿಯಲ್ಲಿ ಸೇನಾ ಟ್ರಕ್ ಪಲ್ಟಿಯಾಗಿರುವುದು ತಿಳಿದಿತ್ತು. ಅವರು ಅದರಲ್ಲಿ ಇರಲಿಲ್ಲ ಎಂಬ ಆಶಾಭಾವನೆಯಲ್ಲಿ ಅಂದು ರಾತ್ರಿಯಿಡಿ ಕಾದೆ. ಬೆಳಿಗ್ಗೆ ದುರ್ಘಟನೆ ಬಗ್ಗೆ ಮಾಹಿತಿ ಸಿಕ್ಕಿತು. ಡಿ.23ಕ್ಕೆ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು.
-ಅನೂಪ್ ಪೂಜಾರಿ ಪತ್ನಿ ಮಂಜುಶ್ರೀ.
ದೇಶ ಸೇವೆಗೆ ಪ್ರಾಣ ಒತ್ತೆಯಿಟ್ಟ ಅನೂಪ್ ಅವರ ಕುಟುಂಬಕ್ಕೆ ಸರಕಾರ ಪರಿಹಾರ ನೀಡುವ ಜೊತೆಗೆ 2 ವರ್ಷದ ಹೆಣ್ಣುಮಗುವಿರುವ ಅವರ ಪತ್ನಿಗೆ ನೌಕರಿ ನೀಡಬೇಕು. ಈ ಬಗ್ಗೆ ಸಂಬಂಧಪಟ್ಟ ಸಂಸದರು, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಊರಿನಲ್ಲಿ ಯೋಧನ ಹೆಸರು ಅಜರಾಮರವಾಗಿ ಉಳಿಯಲು ಪುತ್ಥಳಿ ನಿರ್ಮಿಸುವ ಚಿಂತನೆಯನ್ನು ಹೊಂದಿದ್ದೇವೆ.
-ಅಶೋಕ್ ಪೂಜಾರಿ ಬೀಜಾಡಿ, ಸಾಮಾಜಿಕ ಕಾರ್ಯಕರ್ತ.
ಅನೂಪ್ ಪೂಜಾರಿ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ ಮುಸ್ಲಿಮರು ಗುಲಾಬಿ ಎಸಳುಗಳನ್ನು ಅನೂಪ್ ಮೃತದೇಹದ ಮೇಲೆ ಸುರಿದು ಅಂತಿಮ ನಮನ ಸಲ್ಲಿಸಿದರು.