ಕೋಡಿ ಬೀಚ್ನಲ್ಲಿ ದುರಂತ| ಇಬ್ಬರು ಸಹೋದರರು ಮೃತ್ಯು: ಮತ್ತೋರ್ವನ ರಕ್ಷಣೆ
ಧನರಾಜ್ - ದರ್ಶನ್
ಕುಂದಾಪುರ, ಡಿ.7: ಕೋಡಿ ಬೀಚ್ನ ಸಮುದ್ರದಲ್ಲಿ ಈಜುತ್ತಿದ್ದ ಮೂವರು ಸಹೋದರರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, ಇವರಲ್ಲಿ ಇಬ್ಬರು ಮೃತಪಟ್ಟು, ಇನ್ನೋರ್ವನನ್ನು ರಕ್ಷಿಸಿದ ಘಟನೆ ಇಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಅಂಪಾರು ಗ್ರಾಮದ ಮೂಡುಬಗೆಯ ದಾಮೋದರ ಪ್ರಭು ಹಾಗೂ ಚಿತ್ರಾಕಲಾ ಪ್ರಭು ದಂಪತಿಯ ಪುತ್ರ ಧನರಾಜ್ (23) ಹಾಗೂ ಆತನ ಸಹೋದರ ದರ್ಶನ್(18) ಎಂದು ಗುರುತಿಸಲಾಗಿದೆ. ಮತ್ತೋರ್ವ ಸಹೋದರ ಧನುಷ್ (20) ಎಂಬವರನ್ನು ರಕ್ಷಿಸಲಾಗಿದೆ.
ಸಂಜೆ ವೇಳೆ ಈ ಮೂವರು ಸಹೋದರರು ಕುಟುಂಬದವರೊಂದಿಗೆ ಕೋಡಿ ಬೀಚ್ಗೆ ಬಂದಿದ್ದು, ಅಲ್ಲಿ ಇವರು ಸಮುದ್ರಕ್ಕೆ ಇಳಿದು ನೀರಿನಲ್ಲಿ ಈಜುತ್ತಿದ್ದರೆನ್ನಲಾಗಿದೆ. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಮೂವರು ಕೂಡ ನೀರಿನಲ್ಲಿ ಕೊಚ್ಚಿ ಕೊಂಡು ಹೋದರೆಂದು ತಿಳಿದುಬಂದಿದೆ.
ಕೂಡಲೇ ಸ್ಥಳದಲ್ಲಿದ್ದ ಪ್ರವಾಸಿಗರು ಹಾಗೂ ಸ್ಥಳೀಯರು ಸೇರಿ ಮೂವರನ್ನು ರಕ್ಷಿಸಲು ಮುಂದಾದರು. ಇವರ ಪೈಕಿ ತಕ್ಷಣ ಧನುಷ್ನನ್ನು ರಕ್ಷಿಸಿ ದಡಕ್ಕೆ ತಂದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ ಧನರಾಜ್ ಪತ್ತೆಯಾಗಿದ್ದು, ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಅಲ್ಲೇ ಮೃತಪಟ್ಟಿದ್ದರೆಂದು ತಿಳಿದು ಬಂದಿದೆ. ಬಳಿಕ ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಸಿದ್ದು, ಕೆಲ ಸಮಯದ ಬಳಿಕ ಆತನ ಮೃತದೇಹ ಕೂಡ ಅಲ್ಲೇ ಸಮೀಪ ಪತ್ತೆಯಾಗಿದೆ.
ಧನರಾಜ್ ಪ್ರಭು ವಿಪ್ರೋದಲ್ಲಿ ಕೆಲಸ ಮಾಡುತ್ತಿದ್ದರೆ, ದರ್ಶನ್ ಕುಂದಾಪುರ ಜ್ಯೂನಿಯರ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದುಬಂದಿದೆ. ಧನುಷ್ ಸುರತ್ಕಲ್ ಎನ್ಐಟಿಕೆ ಕಾಲೇಜಿನ ವಿದ್ಯಾರ್ಥಿ. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.