ಕುಂದಾಪುರ| ಕರ್ತವ್ಯ ಲೋಪ ಎಸಗಿದ ಮುಖ್ಯ ಶಿಕ್ಷಕಿ ವಿರುದ್ಧ ಕ್ರಮಕೈಗೊಳ್ಳದಿರುವುದನ್ನು ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕುಂದಾಪುರ: ಉಪ್ಪಿನಕುದ್ರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧ ಕರ್ತವ್ಯ ಲೋಪ ಎಸಗಿರುವ ಬಗ್ಗೆ ದೂರು ನೀಡಿ ಮೂರು ತಿಂಗಳಾದರೂ ಕ್ರಮಕೈಗೊಳ್ಳದಿರುವುದನ್ನು ಖಂಡಿಸಿ, ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್, ಅಕ್ಷರ ದಾಸೋಹ ಕಾರ್‍ಯಕ್ರಮಗಳ ಅನುಷ್ಠಾನ ಸಂಬಂಧ ಕರ್ತವ್ಯ ಲೋಪ ಎಸಗಿರುವುದಾಗಿ ಮುಖ್ಯ ಶಿಕ್ಷಕಿ ಮಾಲತಿ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಶಿಕ್ಷಣ ಇಲಾಖೆ ಆಯುಕ್ತರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಪೋಷಕರ ಬೆಂಬಲದೊಂದಿಗೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಕಿ ವರ್ಗಾವಣೆಯಾಗದೇ ಮತ್ತೆ ನಾವು ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದರು.
ಈ ವೇಳೆ ಪೋಷಕರಿಂದ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾದವು ಇದರಿಂದ ಕೆಲ ಹೊತ್ತು ಇವರ ಮಧ್ಯೆ ವಾಗ್ವಾದ ಜಟಾಪಟಿ ನಡೆಯಿತು. ಸ್ಥಳಕ್ಕೆ ಆಗಮಿಸಿದ ಕುಂದಾಪುರ ನಗರ ಠಾಣೆ ಎಸ್‌ಐಗಳಾದ ಪುಷ್ಪಾ ಹಾಗೂ ನಂಜಾ ನಾಯ್ಕ್, ಪರಿಸ್ಥಿತಿ ತಿಳಿಗೊಳಿಸಿದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಹಾಗೂ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಶಾಲೆಗೆ ಆಗಮಿಸಿ, ಪೋಷಕರು, ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ವರ್ಗಾವಣೆ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಿ, ಇಲಾಖೆಗೆ ವರದಿ ನೀಡಲಾಗಿದೆ. ಆ ಪಕ್ರಿಯೆ ಆಗಲು 3 ತಿಂಗಳು ಆಗಬಹುದು. ಅಲ್ಲಿಯವರೆಗೆ ಮುಖ್ಯ ಶಿಕ್ಷಕಿ ಇಲ್ಲೇ ಮುಂದುವರಿಯಲಿ ಎಂದು ಹೇಳಿದರು.
ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಬಳಿಕ ಕೊನೆಯದಾಗಿ ಮುಖ್ಯ ಶಿಕ್ಷಕರು ಮಂಗಳವಾರದಿಂದ ಶಾಲೆಗೆ ಬರುವುದಿಲ್ಲ. ಗಣಿತ ಪಾಠಕ್ಕೆ ಬದಲಿ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂಬ ಭರವಸೆ ನೀಡಿದ್ದರಿಂದ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯ ಕಂಡಿತು.
ತಲ್ಲೂರು ಗ್ರಾ.ಪಂ. ಅಧ್ಯಕ್ಷ ಗಿರೀಶ್ ನಾಯ್ಕ್, ಎಸ್‌ಡಿಎಂಸಿ ಸದಸ್ಯರು, ಅಪಾರ ಸಂಖ್ಯೆಯ ಪೋಷಕರು, ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.