ಲಖಿಂಪುರ ಕೇರಿ ರೈತರ ಹತ್ಯೆ ಪ್ರಕರಣ: ಉಡುಪಿಯಲ್ಲಿ ಕಪ್ಪು ದಿನಾಚರಣೆ
ಲಖಿಂಪುರ ಕೇರಿ ರೈತರ ಹತ್ಯೆ ಪ್ರಕರಣ: ಉಡುಪಿಯಲ್ಲಿ ಕಪ್ಪು ದಿನಾಚರಣೆ
ಉಡುಪಿ, ಅ.4: ಉತ್ತರ ಪ್ರದೇಶದ ಲಖಿಂಪುರ ಕೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಷ್ ಮಿಶ್ರ ರೈತ ಹೋರಾಟಗಾರರ ಮೇಲೆ ಕಾರು ಹರಿಸಿ ಮಾರಣಹೋಮ ನಡೆಸಿದ ಅ.3ರ ದಿನವನ್ನು ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಕಪ್ಪು ದಿನವನ್ನಾಗಿ ಆಚರಿಸಲಾಯಿತು.
ಈ ಪ್ರಯುಕ್ತ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರು ಹರಿಸಿ ನಾಲ್ಕು ರೈತರು ಹಾಗೂ ಒಬ್ಬ ಪತ್ರಿಕಾ ವರದಿಗಾರನ ಕೊಲೆಗೆ ಕಾರಣವಾಗಿರುವ ಸಚಿವ ಅಜಯ್ ಮಿಶ್ರಾನನ್ನು ಸಂಪುಟದಿಂದ ಕೈ ಬಿಟ್ಟು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಚಂದ್ರಶೇಖರ ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕವಾಗಿ ಮಾತನಾಡಿ, ಅಮಾನವೀಯ ಕೃತ್ಯ ಎಸಗಿದವರನ್ನು ಕೇಂದ್ರ ಸರಕಾರ ರಕ್ಷಿಸುತ್ತಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಮುಖಂಡರಾದ ಶಶಿಧರ ಗೊಲ್ಲ, ಎಚ್. ನರಸಿಂಹ, ಮಹಾಬಲ ವಡೇರಹೋಬಳಿ, ಸಂತೋಷ ಹೆಮ್ಮಾಡಿ, ರಾಜು ದೇವಾಡಿಗ, ರವಿ ವಿ.ಎಂ., ಸದಾಶಿವ ಪೂಜಾರಿ, ಸುಭಾಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.