ಲ್ಯಾಪ್‌ಟಾಪ್ ಕಳವು ಪ್ರಕರಣ: ಆರೋಪಿಗಳಿಬ್ಬರ ಬಂಧನ
ಮಣಿಪಾಲ, ಸೆ.2: ವಿದ್ಯಾರತ್ನ ನಗರದ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಲ್ಯಾಪ್‌ಟಾಪ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಇಂದು ಕಟಪಾಡಿ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ತಿರುಪತ್ತೂರು ನಿವಾಸಿ ಪಿ.ಕಾರ್ತೀಕ್(28) ಮತ್ತು ಆಂಧ್ರಪ್ರದೇಶ ರಾಜ್ಯದ ಚಿತ್ತೂರು ನಿವಾಸಿ ಬಾಲನ್(34) ಬಂಧಿತ ಆರೋಪಿಗಳು. ಇವರಿಂದ ಸುಮಾರು 4ಲಕ್ಷ ರೂ. ಮೌಲ್ಯದ ಎರಡು ಲ್ಯಾಪ್ ಟಾಪ್ ಮತ್ತು ಒಂದು ಐಪಾಡ್‌ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿದ್ಯಾರತ್ನ ನಗರದ ಪ್ರಿನ್ಸೆಸ್ ಕೀರ್ತಿ ಅಪಾರ್ಟಮೆಂಟನ್‌ನಲ್ಲಿ ವಾಸವಾಗಿರುವ ಆಕಾಶ್ ಸಿ.ಸೂರ್ಯವಂಶಿ ಎಂಬವರ ರೂಮಿನಲ್ಲಿ ಆ.31ರಂದು ಎರಡು ಲ್ಯಾಪ್‌ಟಾಪ್ ಮತ್ತು ಒಂದು ಐಪಾಡ್ ಕಳವಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕ ರಣ ದಾಖಲಾಗಿತ್ತು. ಈ ಪ್ರಕರಣದ ಪತ್ತೆಗಾಗಿ ಮಣಿಪಾಲ ಪೊಲೀಸ್ ನಿರೀಕ್ಷಕ ಟಿ.ವಿ.ದೇವರಾಜ್ ನೇತೃತ್ವದಲ್ಲಿ ಎಸ್ಸೈ ಗಳಾದ ರಾಘವೇಂದ್ರ, ಅಕ್ಷಯ ಕುಮಾರಿ, ಎಎಸ್ಸೈ ವಿವೇಕಾ ನಂದ, ಸಿಬ್ಬಂದಿ ಇಮ್ರಾನ್, ಸುಕುಮಾರ್ ಶೆಟ್ಟಿ ಹಾಗೂ ರಘು ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
‘ಮಣಿಪಾಲದಲ್ಲಿ ಅನೇಕ ಅಪಾರ್ಟಮೆಂಟ್‌ಗಳಿದ್ದು, ಬಹುತೇಕ ವಿದ್ಯಾರ್ಥಿ ಗಳು ಅಪಾರ್ಟಮೆಂಟ್‌ನಲ್ಲಿ ವಾಸವಿದ್ದಾರೆ. ವಿದ್ಯಾರ್ಥಿಗಳು ತಾವು ಬಳಸುವ ಬೆಲೆಬಾಳುವ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್‌ಟಾಪ್, ಮೊಬೈಲ್, ಐಪಾಡ್‌ಗಳನ್ನು ರೂಮ್‌ನಲ್ಲಿ ಇಟ್ಟು ಬಾಗಿಲು ಹಾಕದೇ ನಿರ್ಲಕ್ಷ್ಯ ವಹಿಸುತ್ತಿದ್ದು ಆರೋಪಿಗಳು ಇದನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವುದು ತನಿಖೆಯಿಂದ ಕಂಡು ಬಂದಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗರೂಕತೆಯಿಂದ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ.