ನಾರಾಯಣ ಗುರು ಸಂದೇಶ ಸಾಮರಸ್ಯ ಜಾಥಕ್ಕೆ ಚಾಲನೆ
ಉಡುಪಿ: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಪ್ರಯುಕ್ತ ಗುರು ಸಂದೇಶ ಸಾಮರಸ್ಯ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ಬನ್ನಂಜೆಯ ಬಿಲ್ಲವರ ಸೇವಾ ಸಂಘದ ಆವರಣದಲ್ಲಿ ಜಾಥಕ್ಕೆ ಪಕ್ಕಿಬೆಟ್ಟು ಶ್ರೀಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವಿಠಲ ಪೂಜಾರಿ, ಮಾಜಿ ನಗರಸಭೆ ಅಧ್ಯಕ್ಷೆ ಆನಂದಿ, ಜೀವರಕ್ಷಕ ಈಶ್ವರ ಮಲ್ಪೆ, ಸಮಾಜ ಸೇವಕ ಸತೀಶ್ ಸುವರ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಆನಂದಿ, ನಾರಾಯಣಗುರುಗಳ ಸಂದೇಶವನ್ನು ಸಾರುವ ಮೂಲಕ ಸಮಾಜದಲ್ಲಿ ಸೌಹಾದರ್ತೆ ಯನ್ನು ಮೂಡಿಸುವ ಕಾರ್ಯ ವನ್ನು ಮಾಡುತ್ತಿರುವುದು ಮಾದರಿಯಾಗಿದೆ. ಅವರ ಸಂದೇಶ ಇಡೀ ಜಗತ್ತಿಗೆ ಅಗತ್ಯ ವಾಗಿದೆ. ಗುರುಗಳ ಸಂದೇಶವನ್ನು ಅನುಸರಿಸುವುದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಿಟ್ಟೂರು ಬಾಳಿಗಾ ಫಿಶ್‌ನೆಟ್‌ನ ಜನರಲ್ ಮೆನೇಜರ್ ಚಂದ್ರಶೇಖರ್ ಸುವರ್ಣ, ಉದ್ಯಮಿಗಳಾದ ಭಾಸ್ಕರ್ ಜತ್ತನ್, ಪ್ರಭಾಕರ ಪೂಜಾರಿ, ವೇದಿಕೆಯ ಗೌರವಾಧ್ಯಕ್ಷ ದಿವಾಕರ್ ಸನಿಲ್, ಜಿಪಂ ಮಾಜಿ ಸದಸ್ಯರಾದ ಜನಾರ್ದನ ತೋನ್ಸೆ, ಗೀತಾಂಜಲಿ ಸುವರ್ಣ ಶುಭ ಹಾರೈಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಶು ಕಲ್ಮಾಡಿ, ಉಪಾಧ್ಯಕ್ಷರಾದ ವಿಜಯ ಕೋಟ್ಯಾನ್, ಎನ್.ಮಹೇಶ್ ಕುಮಾರ್, ಕೋಶಾಧಿಕಾರಿ ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶರತ್ ಜತ್ತನ್ನ ಉಪಸ್ಥಿತರಿದ್ದರು. ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಸ್ವಾಗತಿಸಿದರು. ದಯಾನಂದ ಕರ್ಕೇರ ಉಗ್ಗೇಲ್‌ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಬನ್ನಂಜೆಯಿಂದ ಹೊರಟ ಜಾಥವು ಕಲ್ಸಂಕ ಮಾರ್ಗವಾಗಿ ಅಂಬಾಗಿಲು- ಸಂತೆಕಟ್ಟೆ- ನೇಜಾರು- ಕೆಮ್ಮಣ್ಣು- ಹೂಡೆ- ಗುಜ್ಜರಬೆಟ್ಟು- ವಡಭಾಂಡೇಶ್ವರ- ಮಲ್ಪೆ- ಕಲ್ಮಾಡಿ- ಕಿದಿಯೂರು- ಕಡೆಕಾರ್- ಕುತ್ಪಾಡಿ- ಸಂಪಿಗೆನಗರ- ಉದ್ಯಾವರ ದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕಟಪಾಡಿ ಶ್ರೀವಿಶ್ವನಾಥಕ್ಷೇತ್ರ ತಲುಪಿ ಗುರು ಪೂಜೆಯೊಂದಿಗೆ ಸಮಾಪನಗೊಂಡಿತು. ಜಾಥದಲ್ಲಿ ನೂರಾರು ವಾಹನಗಳು ಪಾಲ್ಗೊಂಡಿದ್ದವು.
ಮುಸ್ಲಿಮರಿಂದ ತಂಪು ಪಾನೀಯ ವಿತರಣೆ
ಸಂತೆಕಟ್ಟೆ -ನೇಜಾರು -ಕೆಮ್ಮಣ್ಣು ಮಾರ್ಗವಾಗಿ ಹೂಡೆಗೆ ಆಗಮಿಸಿದ ಜಾಥವನ್ನು ಹೂಡೆಯ ಮುಸ್ಲಿಮರು ಸ್ವಾಗತಿಸಿ ಮೆರವಣಿಗೆಯಲ್ಲಿ ಆಗಮಿಸಿದವರಿಗೆ ತಂಪು ಪಾನೀಯ ವಿತರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಸದಸ್ಯ ಸಾದಿಕ್ ಉಸ್ತಾದ್, ಅಫ್ಜಲ್ ಬಿ.ಹೂಡೆ, ರಘುರಾಮ್ ಶೆಟ್ಟಿ, ಅಬ್ದುಲ್ ಕಾದೀರ್ ಮೊಯ್ದಿನ್, ವರೋನಿಕಾ ಕರ್ನೆಲಿಯೋ, ಹುಸೇನ್ ಕೋಡಿಬೆಂಗ್ರೆ, ಮಹೇಶ್ ಪೂಜಾರಿ, ಬೈಕಾಡಿ ಹುಸೇನ್ ಸಾಹೇಬ್, ಜಫ್ರುಲ್ಲಾ ನೇಜಾರು, ಜಫ್ರುಲ್ಲಾ ಸಾಹೇಬ್ ಹೂಡೆ, ವಸೀಮ್ ಗುಜ್ಜರಬೆಟ್ಟು, ಕುಸುಮಾ, ಸದಾನಂದ ಪೂಜಾರಿ, ಜಗನ್ನಾಥ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.