ಕಾನೂನು ಮನುಷ್ಯನನ್ನು ನೆರಳಿನಂತೆ ಹಿಂಬಾಲಿಸುತ್ತದೆ: ನ್ಯಾ.ಶಿವಪ್ಪ
‘ಪ್ರತಿಯೊಬ್ಬರೂ ಕಾನೂನನ್ನು ಅರಿತು ಪಾಲಿಸಬೇಕು’
ಉಡುಪಿ, ನ.9: ಮನುಷ್ಯನನ್ನು ಕಾನೂನು ನೆರಳಿನಂತೆ ಸದಾ ಹಿಂಬಾಲಿಸುತ್ತದೆ. ಅದರಿಂದ ನೀವು ತಪ್ಪಿಸಿಕೊಳ್ಳಲಾರಿರಿ. ಹೀಗಾಗಿ ನೀವು ತಪ್ಪದೇ ಕಾನೂನನ್ನು ಪಾಲನೆ ಮಾಡಲೇಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಶಾಂತವೀರ ಶಿವಪ್ಪ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಉಡುಪಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವೈಕುಂಠ ಬಾಳಿಗಾ ಕಾನೂನು ಕಾಲೇಜು ಉಡುಪಿ ಹಾಗೂ ಎಂಜಿಎಂ ಪದವಿ ಪೂರ್ವ ಕಾಲೇಜು ಉಡುಪಿ ಇವುಗಳ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗುರು ವಾರ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾನೂನು ಮನುಷ್ಯನನ್ನು ಚಕ್ರವ್ಯೆಹದಲ್ಲಿಟ್ಟಿರುತ್ತದೆ. ಕಾನೂನಿನಿಂದ ನಿಮಗೆ ರಕ್ಷಣೆ ಇದೆ. ಇದರೊಂದಿಗೆ ಕಾನೂನಿನ ಪಾಲನೆಯೂ ಆಗಬೇಕು. ಕಾನೂನಿನ ಪಾಲನೆ ಸರಳವಾಗಿದೆ ಎಂದು ಶಾಂತವೀರ ಶಿವಪ್ಪ ನುಡಿದರು.
ದೇಶದ ಪ್ರತಿಯೊಬ್ಬ ನಾಗರಿಕರು ಈ ದೇಶದ ಕಾನೂನುಗಳನ್ನು ಅರಿತು ಪರಿಪಾಲನೆ ಮಾಡಬೇಕು. ತಪ್ಪು ಮಾಡಿದಾಗ ಕಾನೂನಿನ ಜ್ಞಾನವಿಲ್ಲವೆಂದು ಹೇಳಿ ಯಾವುದೇ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ಅವರು ನುಡಿದರು.
ಪ್ರತಿಯೊಬ್ಬ ಮನುಷ್ಯ ಹುಟ್ಟಿನಿಂದ ಕೊನೆಯವರೆಗೆ ಜೀವನದ ವಿವಿಧ ಹಂತಗಳಲ್ಲಿ ಅನೇಕ ಕಾನೂನುಗಳು ರಕ್ಷಣೆಗೆ ಇರು ತ್ತವೆ. ಇವುಗಳನ್ನು ಪ್ರತಿಯೊಬ್ಬರೂ ಅರಿತು ಪಾಲಿಸಬೇಕು. ಕಾನೂನುಗಳನ್ನು ಉಲ್ಲಂಘಿಸಿ, ಇವುಗಳ ಜ್ಞಾನವಿಲ್ಲವೆಂದು ಹೇಳಿ ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕಾನೂನಿನ ಪಾಲನೆ ಸರಳವಾಗಿದೆ. ಬಸವಣ್ಣ ಅವರು ತಮ್ಮ ವಚನವೊಂದರಲ್ಲಿ (ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ...) ಕಾನೂನಿನ ಪಾಲನೆ ಬಗ್ಗೆ ಸೊಗಸಾಗಿ, ಸರಳವಾಗಿ ಹೇಳಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕಾನೂನು ಪಾಲನೆ ಸಾಧ್ಯ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್. ಮಾತನಾಡಿ, ಕಾನೂನು ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಪ್ರತಿ ದಿನವೂ ನಾವು ಅರಿವಿದ್ದೋ, ಇಲ್ಲದೆಯೋ ಕಾನೂನಿನ ಚೌಕಟ್ಟಿನಲ್ಲೇ ನಮ್ಮೆಲ್ಲಾ ಕೆಲಸಗಳನ್ನು ಮಾಡುತ್ತಿರುತ್ತೇವೆ. ಹೀಗಾಗಿ ಕಾನೂನಿನ ಬಗ್ಗೆ ಪ್ರತಿಯೊ ಬ್ಬರು ತಿಳಿದಿರಲೇ ಬೇಕಾಗುತ್ತದೆ. ಯುವಜನತೆ ವಿದ್ಯಾರ್ಥಿ ಜೀವನದಿಂದಲೇ ಕಾನೂನು ಕುರಿತು ಅರಿವು ಹೊಂದಿರುವುದು ಅಗತ್ಯ ಎಂದರು.
ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರದ ವತಿುಂದ ಶಾಲಾ-ಕಾಲೇಜುಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಕಾನೂನು ಸೌಲಭ್ಯದಿಂದ ವಂಚಿತರಾದವರಿಗೆ ಹಾಗೂ ಬಡವರ್ಗದವರಿಗೆ ಉಚಿತ ಕಾನೂನು ಸೇವೆಗಳನ್ನು ಪ್ರಾಧಿಕಾರದ ಮೂಲಕ ನೀಡಲಾಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸಿ, ಅವರಿಗೆ ನೆರವು ನೀಡುವುದು ಕಾನೂನು ಸೇವಾ ಪ್ರಾಧಿಕಾರದ ಕರ್ತವ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲಪ್ರೊ.ಲಕ್ಷ್ಮೀನಾರಾಯಣ ಕಾರಂತ ಮಾತನಾಡಿದರು. ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಎ. ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ರೋಹಿತ್ ಎಸ್ ಅಮೀನ್ ಹಾಗೂ ಡಾ. ನವೀನ್‌ಚಂದ್ರ ಸಿ. ಕಾನೂನುಗಳ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.