ಕನ್ನಡ ಭಾಷೆ ನಾಡಿನ ಜನತೆಯ ಉಸಿರಾಗಲಿ: ಪುತ್ತಿಗೆಶ್ರೀ
‘ಕರ್ನಾಟಕ’ ಸುವರ್ಣ ಸಂಭ್ರಮ ಚಿತ್ರಕಲಾ ಸ್ಪರ್ಧೆ
ಉಡುಪಿ, ಸೆ.13: ಕರ್ನಾಟಕ ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡಿರುವ ಈ ಸಂದರ್ಭದಲ್ಲಿ ಕನ್ನಡ ಭಾಷೆ ನಾಡಿನ ಕನ್ನಡಿಗರೆಲ್ಲರ ಉಸಿರಾಗಲಿ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾರೈಸಿದ್ದಾರೆ.
‘ಕರ್ನಾಟಕ’ ಸುವರ್ಣ ಸಂಭ್ರಮದ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರ್ಟಿಸ್ಟ್ ಫೋರಂ ಉಡುಪಿ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸಿ ಮಾತನಾಡಿದ ಸ್ವಾಮೀಜಿ, ಇಲ್ಲಿ ಬಹುಮಾನ ಗಳಿಕೆ ಗಿಂತ ಸ್ಪರ್ಧೆಗಳಲ್ಲಿ ಭಾಗವಹಿವಿಸುಕೆ ಮುಖ್ಯ. ಸ್ಪರ್ಧಾ ಮನೋಭಾವ ಯಾವತ್ತೂ ಮಕ್ಕಳಲ್ಲಿರ ಬೇಕು ಎಂದವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಬಹು ಭಾಷೆ, ಬಹು ಕಲೆ- ಸಂಸ್ಕೃತಿಯ ಈ ಕರಾವಳಿ ಭಾಗದಲ್ಲಿ ಮುಂದಿನ ತಿಂಗಳು ಮಂಗಳೂರಿನಲ್ಲಿ ನಡೆಯುವ ಬಹು ಸಂಸ್ಕೃತಿ ಉತ್ಸವಕ್ಕೆ ಪೂರಕವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸ್ಪರ್ಧೆಗಳನ್ನು ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾ ಗುತ್ತಿದೆ.ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ರಾಷ್ಟ್ರೀಯ ಹಬ್ಬಗಳು, ಆಚಾರ-ವಿಚಾರ, ಸಂಸ್ಕೃತಿಯನ್ನು ಮೈಗೂಡಿಸಿ ಕೊಂಡು ದೇಶದ ಸುಸಂಸ್ಕೃತ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳಬೇಕೆಂದರು.
ಜಿಲ್ಲಾಮಟ್ಟದ ಈ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಬಹುಮಾನ 3,000 ರೂ., ದ್ವಿತೀಯ ಬಹುಮಾನ 2,000 ರೂ., ತೃತೀಯ ಬಹುಮಾನ 1,000 ರೂ. ನಗದು ಹಾಗೂ 5 ಸಮಾಧಾನಕರ ಬಹುಮಾನಗಳು ಮತ್ತು ಸ್ಪರ್ಧೆ ಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ಮಂಗಳೂರು ವಲಯ ಮಟ್ಟದ ಕಾರ್ಯ ಕ್ರಮದಲ್ಲಿ ನೀಡಲಾಗುವುದು ಎಂದರು. ಆರ್ಟಿಸ್ಟ್ ಫೋರಂನಿಂದ ಸ್ಪರ್ಧಾ ವಿಜೇತ ಮಕ್ಕಳಿಗೆ ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್, ಆರ್ಟಿಸ್ಟ್ ಫೋರಂ ಉಡುಪಿ ಕಾರ್ಯದರ್ಶಿ ಸಕು ಪಾಂಗಾಳ, ಶ್ರೀಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಪ್ರಾಸಾವ್ತಿಕ ಮಾತನಾಡಿ ಸ್ವಾಗತಿಸಿದರು. ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ವಂದಿಸಿದರು.