ಉಡುಪಿ ನೋಂದಣಿ ಕಚೇರಿಗೆ ಲೋಕಾಯುಕ್ತ ಎಸ್ಪಿ ದಾಳಿ; ಸರ್ಚ್ ವಾರೆಂಟ್‌ನೊಂದಿಗೆ ತನಿಖೆ
ಉಡುಪಿ: ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಉಡುಪಿ ಜಿಲ್ಲೆಗೆ ನೀಡಿದ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ವಕೀಲರೊಂದಿಗೆ ನಡೆಸಿದ ಸಂವಾದ ವೇಳೆ ಉಡುಪಿಯ ನೊಂದಣಿ ಕಚೇರಿಯಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ವಿಭಾಗದ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಇಂದು ಉಡುಪಿ ನೊಂದಣಿ ಕಚೇರಿಗೆ ದಾಳಿ ನಡೆಸಿ ಸರ್ಚ್ ವಾರೆಂಟ್‌ನೊಂದಿಗೆ ತನಿಖೆ ನಡೆಸಲಾಯಿತು.
ಸಂವಾದದ ವೇಳೆ ವಕೀಲರ ಸಂಘದ ಹಲವರು ಮಂದಿ ನೋಂದಣಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನ್ಯಾಯಮೂರ್ತಿ ಕೆ. ಎನ್.ಫಣೀಂದ್ರರ ಗಮನ ಸೆಳೆದಿದ್ದರು.
ಉಪಲೋಕಾಯುಕ್ತರು ಒಂದೇ ದಿನದಲ್ಲಿ ಉಡುಪಿ ನೋಂದಣಿ ಕಚೇರಿಯ ತನಿಖೆಗೆ ಸರ್ಚ್ ವಾರಂಟ್ ಹೊರಡಿಸಿದ್ದು, ತನಿಖೆಗೆ ಮಂಗಳೂರು ವಿಭಾಗ ಲೋಕಾಯುಕ್ತದ ಎಸ್ಪಿ ಅವರಿಗೆ ಆದೇಶಿಸಿದ್ದರು.
ಮಂಗಳೂರಿನ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಸರ್ಚ್ ವಾರೆಂಟ್ ಆದೇಶದಂತೆ ಉಡುಪಿ ನೋಂದಣಿ ಕಚೇರಿಗೆ ಭೇಟಿ ನೀಡಿ ತನಿಖೆ ಕೈಗೊಂಡು ಪರಿಶೀಲಿಸಿದರು. ಆದರೆ ಈ ಸಂದರ್ಭದಲ್ಲಿ ಯಾವುದೇ ಅವ್ಯವಹಾರ, ಭ್ರಷ್ಟಾಚಾರದ ಪುರಾವೆ ತಂಡ ದೊರೆಯಲಿಲ್ಲ ಎನ್ನಲಾಗಿದೆ.
ಲೋಕಾಯುಕ್ತ ಎಸ್ಪಿ ತಂಡದ ತನಿಖೆ ಹಾಗೂ ಪರಿಶೀಲನೆಯ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ವಕೀಲರು ಹಾಜರಿದ್ದರು.