ವಿಶ್ವ ಶಾಂತಿಗೆ ಶ್ರೀಕೃಷ್ಣನ ಸಂದೇಶ ಅತೀ ಅಗತ್ಯ: ಡಾ.ವೀರೇಂದ್ರ ಹೆಗ್ಗಡೆ
ಉಡುಪಿ, ಸೆ.16: ಜಗತ್ತಿನ ದೇಶಗಳಲ್ಲಿ ಯುದ್ಧ, ಘರ್ಷಣೆ, ಹಿಂಸೆಗಳು ತಾಂಡವವಾಡುತ್ತಿವೆ. ಆದುದರಿಂದ ವಿಶ್ವ ಶಾಂತಿಗೆ ಶ್ರೀಕೃಷ್ಣನ ಸಂದೇಶ ಅತೀ ಅಗತ್ಯವಾಗಿದೆ. ಆದುದರಿಂದ ಪುತ್ತಿಗೆ ಪರ್ಯಾಯವು ಶ್ರೀಕೃಷ್ಣ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರುವ ಪರ್ಯಾಯವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಉಡುಪಿ ಪುತ್ತಿಗೆ ಮಠದಲ್ಲಿ ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಲಯವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕೃಷ್ಣ ಸಂದೇಶವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬೇಕು. ಸಣ್ಣ ಸಣ್ಣ ವಿಚಾರಕ್ಕೆ ಘರ್ಷಣೆ ಮಾಡದೆ ವಿಶ್ವ ದೃಷ್ಠಿಯನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಜಗತ್ತಿನಲ್ಲಿ ಶಾಂತಿ ಸಮೃದ್ಧಿ ಮೂಡಲಿ ಎಂದು ಹಾರೈಸಿದರು.
ಸಮಿತಿಯ ಕಾರ್ಯಾಧ್ಯಕ್ಷ ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿಯ ಪರ್ಯಾಯ ಮಹೋತ್ಸವಕ್ಕೆ ಐದು ಕೋಟಿ ರೂ. ವೆಚ್ಚದ ನಿರೀಕ್ಷೆ ಹೊಂದಿದ್ದೇವೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರ ಜೊತೆ ಗೂಡಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಪರ್ಯಾಯಕ್ಕೆ ಆಹ್ವಾನ ನೀಡ ಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರ್ಯಾಯ ಲಾಂಛನವನ್ನು ಡಾ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು. ಸಮಿತಿಯ ಎಸ್‌ಬಿ ಖಾತೆಯ ಕ್ಯೂಆರ್ ಕೋಡ್‌ನ್ನು ಸಮಿತಿಯ ಅಧ್ಯಕ್ಷ ಡಾ.ಎಚ್.ಎಸ್‌ಬಲ್ಲಾಳ್ ಅನಾವರಣಗೊಳಿಸಿದರು.
ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಟೀಲು ದೇವಸ್ಥಾನದ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ, ಕುಂಭಾಶಿ ದೇವಸ್ಥಾನದ ಸೂರ್ಯನಾರಾಯಣ ಉಪಾಧ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಗೌರವ ಕಾರ್ಯದರ್ಶಿ ನಾಗೇಶ್ ಹೆಗ್ಡೆ, ಹೇರಂಜೆ ಕೃಷ್ಣ ಭಟ್, ಕೋಶಾಧಿಕಾರಿ ರಂಜನ್ ಕಲ್ಕೂರ ಉಪಸ್ಥಿತರಿದ್ದರು.
ಮಠದ ದಿವಾನ ನಾಗರಾಜ್ ಆಚಾರ್ಯ ಸ್ವಾಗತಿಸಿದರು. ಪ್ರಸನ್ನ ಆಚಾರ್ಯ ವಂದಿಸಿದರು. ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.