ವೈರುಧ್ಯಗಳೊಂದಿಗೂ ಸಂವಾದಿಸುವ ಗಾಂಧಿ ಚಿಂತನೆ ಶ್ರೇಷ್ಠ: ರಾಮದಾಸ್ ಪ್ರಭು

ಕುಂದಾಪುರ: ಮಹಾತ್ಮ ಗಾಂಧಿಯವರದು ಮಧ್ಯಮ ಮಾರ್ಗ. ಅದು ಸಾಮಾನ್ಯ ಜನರ ಮಾರ್ಗವೂ ಹೌದು. ಅವರು ಭಾರತದ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಇದ್ದಂತಹ ಸಮಾನ ಚಿಂತನೆಗಳನ್ನು ಹೊಂದಿದವರನ್ನು ಸಂಘಟಿಸಿದ್ದಲ್ಲದೆ, ವೈರುಧ್ಯ ಚಿಂತನೆಗಳನ್ನು ಹೊಂದಿದವರ ಜೊತೆಗೆ ಸಂವಾದದ ವಾತಾವರಣ ನಿರ್ಮಾಣ ಮಾಡಿರುವುದು ಗಾಂಧಿಯವರ ಶ್ರೇಷ್ಠ ಚಿಂತನೆಯಾಗಿದೆ ಎಂದು ಉಡುಪಿ ಜಿ.ಶಂಕರ್ ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ರಾಮದಾಸ ಪ್ರಭು ಹೇಳಿದ್ದಾರೆ.
ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಕುಂದಾಪುರ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಲಾದ ಸೌಹಾರ್ದತೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಗಾಂಧೀಜಿ ಬಹಳ ಮುಖ್ಯವಾಗಿ ಜಮೀನ್ದಾರ-ರೈತ, ಕಾರ್ಮಿಕ-ಮಾಲೀಕ ಅಥವಾ ಬಂಡವಾಳಶಾಹಿ ಮತ್ತು ಸಾಮಾನ್ಯ ಜನರ ಮಧ್ಯೆ ಸಂವಾದವನ್ನು ಕಲ್ಪಿಸಿದ್ದರು. ಮಾತ್ರವಲ್ಲ ಸೈದ್ಧಾಂತಿಕ ಭಿನ್ನಾಭಿಪ್ರಾಯವಿರುವ ಅಂಬೇಡ್ಕರ್, ಮುಹಮ್ಮದ್ ಅಲಿ ಜಿನ್ನಾ, ಬ್ರಿಟಿಷ್ ವೈಸರಾಯಗಳು ಮುಂತಾದವರ ನಡುವೆ ಸಂವಾದ ಸಾಧ್ಯವಾಗಿಸಿದ್ದರು. ಇದು ಅವರ ವ್ಯಕ್ತಿತ್ವಕ್ಕೆ ವಿಶೇಷ ಗೌರವವನ್ನು ತಂದುಕೊಟ್ಟಿದೆ ಎಂದು ಅವರು ತಿಳಿಸಿದರು.
ದೇಶ ಕಟ್ಟುವ ಕೆಲಸ ಎಂದಿಗೂ ಮುಗಿಯದ ಜವಾಬ್ದಾರಿ ಇಂದಿಗೂ ಮುಂದಿಗೂ ಎಂದೆಂದಿಗೂ ಅದು ಪ್ರಸ್ತುತವಾಗಿದೆ ಹಾಗೂ ಅಗತ್ಯವಾಗಿದೆ. ಅದಕ್ಕಾಗಿ ಗಾಂಧೀಜಿಯವರಂತೆ ಯಾವುದೇ ನಿರೀಕ್ಷೆಗಳಿಲ್ಲದೆ ದೇಶವನ್ನು ಅಪಾರವಾಗಿ ಪ್ರೀತಿಸುವ, ಗೌರವಿಸುವ ರಾಜಕೀಯೇತರ ಸಮಾನ ಮನಸ್ಕರ ಗುಂಪು ಇಂದಿಗೂ ಅಗತ್ಯವಿದೆ. ಆಗ ಮಾತ್ರ ಅಭಿವೃದ್ಧಿಶೀಲ, ಸದೃಢ ಸೌಹಾರ್ದತೆಯ ಭಾರತ ನಿರ್ಮಾಣ ಸಾಧ್ಯ ಎಂದರು.
ಬಸ್ರೂರು ಶ್ರೀಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಂ.ದಿನೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕುಂದಾಪುರ ವಲಯ ಧರ್ಮಗುರು ಫಾ.ಫೌಲ್ ರೇಗೋ, ಜಿಲ್ಲಾ ಮುಸ್ಲಿಂ ಒಕ್ಕೂಟದ ಮೌಲಾನ ಜಮೀರ್ ಅಹಮದ್ ರಶೀದ್, ದಸಂಸ (ಅಂಬೇಡ್ಕರ್ ವಾದ) ತಾಲೂಕು ಪ್ರಧಾನ ಸಂಚಾಲಕ ರಾಜು ಬೆಟ್ಟಿನಮನೆ ಮಾತನಾಡಿದರು.
ಸಹಬಾಳ್ವೆಯ ರಿಯಾಜ್ ಕೋಡಿ, ಮಹಮ್ಮದ್ ರಫೀಕ್, ವಿನೋದ್ ಕ್ರಾಸ್ತಾ, ರಾಮಕೃಷ್ಣ ಹೇರ್ಳೆ, ಕಾರ್ಮಿಕ ಮುಖಂಡರಾದ ಎಚ್.ನರಸಿಂಹ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಆಶಾ ಕರ್ವಾಲೋ, ಸಮುದಾಯ ಸಾಂಸ್ಕೃತಿಕ ಸಂಘಟನೆ ಬಾಲಕೃಷ್ಣ ಕೆ.ಎಂ., ದಲಿತ ಹಕ್ಕುಗಳ ಸಮಿತಿಯ ರವಿ ವಿ.ಎಂ. ಉಪಸ್ಥಿತರಿದ್ದರು.
ಸಭೆಯಲ್ಲಿ ಸಮುದಾಯ ಸಂಗಾತಿಗಳಿಂದ ಸೌಹಾರ್ದ ಗೀತೆಗಳ ಗಾಯನ ಮತ್ತು ವ್ಯಂಗ್ಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಚಂದ್ರಶೇಖರ್ ವಂದಿಸಿದರು. ಉದಯ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹುತಾತ್ಮ ದಿನಾಚರಣೆಯ ಅಂಗವಾಗಿ ಮೊಂಬತ್ತಿಯ ಬೆಳಕಿನಲ್ಲಿ ಕುಂದಾಪುರದ ಅಂಬೇಡ್ಕರ್ ಭವನದಿಂದ ಶಾಸ್ತ್ರಿ ಸರ್ಕಲ್‌ವರೆಗೆ ಎಲ್ಲರೂ ಮೆರವಣಿಗೆಯಲ್ಲಿ ತೆರಳಿ ಗೌರವ ನಮನ ಸಲ್ಲಿಸಲಾಯಿತು.