ಮಾಹೆಯ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು- ಭೂತ’ಕ್ಕೆ ಅಂ.ರಾ. ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ
ಮಣಿಪಾಲ, ಆ.27: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಾಕ್ಷ್ಯಚಿತ್ರ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು - ಭೂತ’ ಪ್ರತಿಷ್ಠಿತ ಕಲ್ಚರ್ ಸಿನಿಮಾ ಇಂಟರ್‌ನೇಷನಲ್ ಫಿಲ್ಮ್ ಫೆಸ್ಟಿವಲ್ (ಇ2ಎಫ್2)ನ ಸಾಮಾಜಿಕ ಆಚರಣೆಗಳು ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆ.25ರಂದು ಮುಂಬೈಯಲ್ಲಿ ವರ್ಚುವಲ್ ಮೂಲಕ ನಡೆಯಿತು.
ಮಾಹೆಯ ‘ಭೂತ’ ಸಾಕ್ಷ್ಯಚಿತ್ರವನ್ನು ಪ್ರಪಂಚದಾದ್ಯಂತದಿಂದ ಬಂದ 800 ಪ್ರವೇಶಗಳಲ್ಲಿ ಆಯ್ಕೆ ಮಾಡಲಾಗಿತ್ತು. ಎರಡು ತಿಂಗಳ ಕಾಲ ಆಯ್ಕೆಗಾರರು ಚಿತ್ರಗಳನ್ನು ವೀಕ್ಷಿಸಿ 15 ವಿಭಾಗಗಳಲ್ಲಿ ತಲಾ 10 ಚಿತ್ರಗಳನ್ನು ಅಂತಿಮ ಸ್ಪರ್ಧೆಗೆ ಆಯ್ಕೆ ಮಾಡಿದ್ದರು. ಇದೇ ಜುಲೈ ತಿಂಗಳಲ್ಲಿ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆದಿದ್ದು, ಇದರಲ್ಲಿ ‘ಭೂತ’ ಸಾಕ್ಷ್ಯಚಿತ್ರವು ಸಾಮಾ ಜಿಕ ಆಚರಣೆಗಳು ವಿಭಾಗದಲ್ಲಿ ಅಗ್ರಸ್ಥಾನ ಪಡೆದು ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕ್ಯಾಂಪಸ್‌ಗಳಲ್ಲಿ ಸಿ2ಎ2 ಎಂಬುದು ವಿಶಿಷ್ಟವಾದ ಚಲನಚಿತ್ರೋತ್ಸವ ವಾಗಿದ್ದು, ಭಾರತದಾದ್ಯಂತ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಯುವಜನತೆಗೆ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಇದು ಜಗತ್ತಿನ ವೈವಿಧ್ಯಮಯ ಸಂಸ್ಕೃತಿಗಳನ್ನು ಅರಿಯಲು ಹಾಗೂ ಅನುಭವಿಸಲು ಕಾಲೇಜು, ವಿವಿಗಳ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತದೆ.
ಈ ಚಿತ್ರೋತ್ಸವದಲ್ಲಿ ಆಯ್ಕೆಯಾದ ಚಿತ್ರಗಳನ್ನು ದೇಶದ ಬೇರೆ ಬೇರೆ ಭಾಗಗಳ ವಿಶ್ವವಿದ್ಯಾನಿಲಯಗಳಲ್ಲಿ ಪ್ರದರ್ಶಿಸಲಾ ಗುತ್ತದೆ. ಈ ಬಾರಿ ಗ್ರೇಟರ್ ನೊಯ್ಡಾದ ಬೆನೆಟ್ ವಿವಿ, ನೊಯ್ಡಾದ ದಿಲ್ಲಿ ಮೆಟ್ರೋಪಾಲಿಟನ್ ಎಜುಕೇಶನ್, ಗಾಂಧಿ ನಗರದ ಪಂಡಿತ್ ದೀನ್‌ದಯಾಳ್ ಎನರ್ಜಿ ವಿವಿ, ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಹಾಗೂ ಬೆಂಗಳೂರಿನ ಆರ್‌ವಿ ವಿವಿಯಲ್ಲಿ ಈ ಚಿತ್ರಗಳ ಪ್ರದರ್ಶನ ನಡೆದಿದ್ದವು.
ಕಲ್ಚರ್ ಸಿನಿಮಾ ಫಿಲ್ಮ್ ಫೆಸ್ಟಿವಲ್ (ಇ2ಎಪ್2)ನ್ನು ಯುಎನ್‌ನ ವಿಶ್ವ ಸಾಂಸ್ಕೃತಿಕ ವೈವಿಧ್ಯತೆಯ ದಿನವಾದ ಮೇ 21ರಂದು ನಡೆಸಲಾಗುತ್ತದೆ. ಈ ಬಾರಿಯೂ ಅದೇ ದಿನದಂದು ಚಲನಚಿತ್ರೋತ್ಸವ ನಡೆದಿತ್ತು ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ಮಾಹೆಯ ಸೆಂಟರ್ ಫಾರ್ ಇಂಟರ್‌ಕಲ್ಚರಲ್ ಸ್ಟಡೀಸ್ ಈ ಸಾಕ್ಷ್ಯಚಿತ್ರ ವನ್ನು ನಿರ್ಮಿಸಿದೆ. ಕೇಂದ್ರದ ಸಂಯೋಜಕ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಶೆಟ್ಟಿ ಅವರು ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿ ಇದೊಂದು ಅಭೂತಪೂರ್ವ ಸಾಧನೆಯಾಗಿದೆ. ಇದಕ್ಕಾಗಿ ನಾವು ವಿದ್ಯಾರ್ಥಿಗಳು ಹಾಗೂ ಪ್ರಾದ್ಯಾಪಕರಿಗೆ ಕೃತಜ್ಞರಾಗಿದ್ದೇವೆ. ಈ ಸಿನಿಮಾಕ್ಕಾಗಿ ತಯಾರಿ ನಡೆಸುವಾಗ ನಾವು ಎಲ್ಲರೊಂದಿಗೆ ಗಹನವಾಗಿ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳು ತಿದ್ದೆವು ಎಂದರು. ನಮ್ಮ ಕೇಂದ್ರವು ಈ ಬಗ್ಗೆ ಸರ್ಟಿಫಿಕೇಟ್ ಕೋರ್ಸ್ ನಡೆಸುತಿದ್ದು, ಈವರೆಗೆ 400 ಮಂದಿ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ನಿರ್ಮಾಣದ ಕೋರ್ಸ್‌ನ್ನು ಮುಗಿಸಿದ್ದಾರೆ ಎಂದರು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಕುಲಪತಿ ಲೆ.ಜ.(ಡಾ) ಎಂ.ಡಿ.ವೆಂಕಟೇಶ್, ಪ್ರತಿಷ್ಠಿತ ಪ್ರಶಸ್ತಿಯನ್ನು ಮಾಹೆಯ ಸಾಕ್ಷ್ಯಚಿತ್ರ ಗೆದ್ದುಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ನಮ್ಮ ತಂಡದ ಸೃಜನಶೀಲತೆ ಹಾಗೂ ತಾದ್ಯಾತ್ಮಕತೆಗೆ ಇದೊಂದು ಉದಾಹರಣೆಯಾಗಿದೆ. ತುಳುನಾಡಿನ ಶ್ರೀಮಂತ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ನಮ್ಮ ತಂಡ ಮುಂಚೂಣಿಗೆ ತಂದಿದೆ ಎಂದರು.