ಮಣಿಪುರ ಅತ್ಯಾಚಾರ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ಮಣಿಪುರ ರಾಜ್ಯದಲ್ಲಿ ತಾಂಡವವಾಡುತ್ತಿರುವ ಹಿಂಸೆ, ಮಹಿಳೆಯರ ವಿವಸ್ತ್ರ ಮೆರವಣಿಗೆ, ಸಾಮೂಹಿಕ ಅತ್ಯಾಚಾರದಂಥ ಅಮಾನವೀಯ ಕೃತ್ಯದ ವಿರುದ್ಧ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಬುಧವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಸುಂದರ ರಾಜ್ಯ ವಾದ ಮಣಿಪುರದಲ್ಲಿ ಹಿಂಸೆಯಿಂದ ರಕ್ತಪಾತವಾಗುತ್ತಿದ್ದು, ಕೇಂದ್ರ ಬಿಜೆಪಿ ಸರಕಾರ ದೇಶವನ್ನು ಮುನ್ನಡೆಸುವ ಪರಿಸ್ಥಿತಿಗಿದು ಸಾಕ್ಷಿಯಾಗಿದೆ. ಹಿಡನ್ ಅಜೆಂಡಾ ಜಾರಿಗೊಳಿಸುತ್ತಿರುವ ಪ್ರಧಾನಿ ಮೋದಿ ಮೌನ ಮುರಿದು ದೇಶದ ಜನತೆಗೆ ಉತ್ತರಿಸಲಿ ಎಂದರು.
ಜು. 29ರಂದು ಜಿಲ್ಲೆಯ ಪ್ರತಿ ಬ್ಲಾಕ್ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿದ್ದು, ಕೇಂದ್ರ ಸರಕಾರ ಸ್ಪಂದಿಸದಿದ್ದರೆ ಸರಕಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಪ್ರಧಾನಿ ಮೋದಿಗೆ ಧಿಕ್ಕಾರ ಕೂಗಿ, ಮಣಿಪುರ ಮುಖ್ಯಮಂತ್ರಿ ರಾವ್ ಬಿರೇನ್ ಸಿಂಗ್ ರಾಜೀನಾಮೆಗೆ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಜ್ಯೋತಿ ಹೆಬ್ಬಾರ್, ವೆರೋನಿಕಾ ಕರ್ನೆಲಿಯೊ, ಶಶಿಧರ ಶೆಟ್ಟಿ ಎಲ್ಲೂರು, ಮಮತಾ ಶೆಟ್ಟಿ, ಸರಸು ಡಿ. ಬಂಗೇರ, ರೇವತಿ ಶೆಟ್ಟಿ, ಐಡಾ ಗಿಬ್ಬ ಡಿಸೋಜಾ, ಹರೀಶ್ ಕಿಣಿ ಅಲೆವೂರು, ರೋಶನಿ ಒಲಿವೆರಾ, ಡಾ. ಸುನೀತಾ ಶೆಟ್ಟಿ ಕೊಕ್ಕರ್ಣೆ, ಶಾಂತಲತಾ ಶೆಟ್ಟಿ, ರಂಜನಿ ಹೆಬ್ಬಾರ್, ಮಾಲಿನಿ ರೈ, ರೇಖಾ ಸುವರ್ಣ, ಕುಶಲ ಶೆಟ್ಟಿ ಇಂದ್ರಾಳಿ, ನಾಗೇಶ್‌ಕುಮಾರ್ ಉದ್ಯಾವರ, ಗೋಪಿ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿದರು.