ಉಡುಪಿಯಲ್ಲಿ ಮಹಿಷಾ ದಸರಾ ಬದಲು ಮಹಿಷೋತ್ಸವ ಆಚರಣೆ: ಜಯನ್ ಮಲ್ಪೆ
ಜಯನ್ ಮಲ್ಪೆ
ಉಡುಪಿ, ಅ.14: ಉಡುಪಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿ ಮೆರವಣಿಗೆ ಹಾಗೂ ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಿ ರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆಯು ಅ.15ರಂದು ನಡೆಸಲು ಉದ್ದೇಶಿಸಿದ್ದ ಮಹಿಷಾ ದಸರಾ ಬದಲು ಮಹಿಷೋತ್ಸವ ನಡೆಸಲು ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಲಿತ ಮುಖಂಡ ಜಯನ್ ಮಲ್ಪೆ, ಕರಾವಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಷಾ ದಸರಾವನ್ನು ನಡೆಸಲು ತೀರ್ಮಾನಿಸಿದ್ದೇವು. ಅದಕ್ಕಾಗಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಉದ್ದೇಶ ಕೂಡ ಇತ್ತು. ಆದರೆ ಜಿಲ್ಲಾಡಳಿತ ಮೆರವಣಿಗೆ ಮತ್ತು ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಿದೆ. ನಿಷೇದಾಜ್ಞೆಯಿಂದ ಧಾರ್ಮಿಕ ಹಾಗೂ ಅಭಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಯಾಗಿದೆ. ನಾವು ಯಾವುವದೇ ಕಾರಣಕ್ಕೂ ಕಾನೂನು ಕೈಗೆ ಎತ್ತಿಕೊಳ್ಳುವುದಿಲ್ಲ ಎಂದರು.
ಮಹಿಷಾಸುರ ಯಾರು ಎಂಬ ವಿಚಾರದಲ್ಲಿ ಸಂಕಿರಣ ಆಯೋಜಿಸಿದ್ದೇವೆ. ರಾಜ್ಯಮಟ್ಟದ ನಾಯಕರ ಸಲಹೆ ಮೇರೆಗೆ ಮಹಿಷ ದಸರಾವನ್ನು ಬದಲಾವಣೆ ಮಾಡಿದ್ದೇವೆ. ಇದರಲ್ಲಿ ದಲಿತ ಸಮುದಾಯದ ಬಂಧುಗಳು ಭಾಗವಹಿಸಲಿದ್ದಾರೆ. ಮಹಿಷ ರಾಕ್ಷಸ ಅಲ್ಲ ರಕ್ಷಕ ಎಂದು ಹೇಳುವುದು ನಮ್ಮ ಉದ್ದೇಶವಾಗಿದೆ. ಯಾವುದೇ ಧರ್ಮ ದೇವರ ನಿಂದನೆ ಮಾಡುವುದು ನಮ್ಮ ಉದ್ದೇಶ ಅಲ್ಲ ಎಂದು ಅವರು ತಿಳಿಸಿದರು.
ಚಲುವರಾಯಸ್ವಾಮಿಗೆ ಮನವಿ: ಇಂದು ಉಡುಪಿಗೆ ಆಗಮಿಸಿದ ರಾಜ್ಯದ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ದಲಿತ ಮುಖಂಡ ಗಣೇಶ್ ನೆರ್ಗಿ ನೇತೃತ್ವದ ನಿಯೋಗ ಮಹಿಷೋತ್ಸವ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ -ಆತಂಕ ಉಂಟಾಗದಂತೆ ಕ್ರಮ ವಹಿಸಲು ಮನವಿ ಮಾಡಿದರು.
ಉಡುಪಿಯ ಮಹಿಷೋತ್ಸವಕ್ಕೆ ಮಾನವ ಬಂಧುತ್ವ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಬೆಂಬಲ ವ್ಯಕ್ತಪಡಿಸಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಚೆನ್ನಕೇಶವ ತಿಳಿಸಿದ್ದಾರೆ.
ಒಳಾಂಗಣದಲ್ಲಿ ಅನುಮತಿ ಅಗತ್ಯವಿಲ್ಲ: ಎಸ್ಪಿ
ಮಹಿಷಾ ದಸರಾ ಬಗ್ಗೆ ಪರ ಹಾಗೂ ವಿರುದ್ಧ ಮೆರವಣಿಗೆ, ಧರಣಿ, ಸತ್ಯಾಗ್ರಹ ಹಾಗೂ ಬ್ಯಾನರ್ ಹಾಕುವಂತಿಲ್ಲ. ಹೊರಾಂಗಣದಲ್ಲಿ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದರು.
ಜಿಲ್ಲೆಯಲ್ಲಿ ಮಹಿಷಾಸುರ ದಸರಾ ಹೊರಾಂಗಣದಲ್ಲಿ ಆಚರಣೆ ನಿರ್ಬಂಧಿಸ ಲಾಗಿದೆ. ಈ ಸಂಬಂಧ ಸೂಕ್ತ ಪೊಲೀಸ್ ಭದ್ರತೆ ಮಾಡಲಾಗಿದೆ. ಅಗತ್ಯ ಬಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಳಾಂಗಣದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಅಗತ್ಯವಿಲ್ಲ. ಆದರೆ ಅಲ್ಲಿ ಕಾಯ್ದೆ ಉಲ್ಲಂಘನೆಯಾದರೂ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.
ನಿಷೇಧಾಜ್ಞೆ ಹಿಂತೆಗೆದುಕೊಳ್ಳಲು ಆಗ್ರಹ
ಕಾನೂನು ಸುವ್ಯವಸ್ಥೆ ಕಾಪಾಡುವ ಹೆಸರಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಿರುವ ಜಿಲ್ಲಾಡಳಿತದ ಕ್ರಮವನ್ನು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ವಿರೋಧಿಸಿದೆ.
ದೇಶದ ಸಂವಿಧಾನದಲ್ಲಿ ಪ್ರಜಾಸತ್ತಾತ್ಮಕ ಚಟುವಟಿಕೆಗಳಿಗೆ ಅವಕಾಶ ಇದೆ. ಹಾಗೆಯೇ ಜನರು ತಮ್ಮ ನಂಬಿಕೆಯ ಆಚರಣೆಗಳನ್ನು ಶಾಂತಿಯುತವಾಗಿ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಆಚರಿಸಬಹುದು. ಬದಲಾಗಿ ನಿಷೇಧಾಜ್ಞೆ ಹೇರುವ ಮೂಲಕ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಸಿದು ಕೊಂಡಂತಾಗಿದೆ. ಇದು ಸರಿಯಲ್ಲ. ಆದುದರಿಂದ ಜಿಲ್ಲಾಡಳಿತವು ನಿಷೇಧಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕೆಂದು ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.