ಮಹುವಾ ಮೊಯಿತ್ರಾ ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ: ಶೋಭಾ ಕರಂದ್ಲಾಜೆ
ಮಹುವಾ ಮೊಯಿತ್ರಾ - ಶೋಭಾ ಕರಂದ್ಲಾಜೆ
ಉಡುಪಿ: ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚವನ್ನು ಸ್ವೀಕರಿಸಿದ್ದ ಆರೋಪದಲ್ಲಿ ಲೋಕಸಭೆಯಿಂದ ಉಚ್ಛಾಟಿತರಾದ ತೃಣಮೂಲ ಕಾಂಗ್ರೆಸ್ನ ಮಹುವಾ ಮೊಯಿತ್ರಾ ಅವರು ಸಂಸದರು ಎಂಬ ಪದಕ್ಕೆ ಕಳಂಕ ತಂದಿದ್ದಾರೆ. ಪ್ರಶ್ನೆ ಕೇಳುವುದಕ್ಕೆ, ಸಂಸತ್ತಿನಲ್ಲಿ ಮಾತನಾಡುವುದಕ್ಕೆ ಕೂಡಾ ಭ್ರಷ್ಟಾಚಾರ ಮಾಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, ಅವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಹೇಳಿದರಲ್ಲದೇ ನಾವು ಪ್ರಶ್ನೆಗಳನ್ನು ಗುಪ್ತವಾಗಿ ಇಡಬೇಕು. ಪಾರ್ಲಿಮೆಂಟ್ ಒಳಗೆ ಬರುವ ತನಕ ಉತ್ತರ ಯಾರಿಗೂ ಗೊತ್ತಾಗುವುದಿಲ್ಲ. ಒಂದು ಪ್ರಶ್ನೆಗೆ ಒಬ್ಬ ಅಧಿಕಾರಿ 15- 20 ದಿನ ಶ್ರಮಪಡುತ್ತಾರೆ. ಆದರೆ ಮಹುವಾ, ಪವಿತ್ರವಾದ ಸದನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದವರು ಆರೋಪಿಸಿದರು.
ಆಕೆ ಸ್ವಂತ ಲಾಭಕ್ಕಾಗಿ, ಸ್ವಾರ್ಥಕಾಗಿ ಸ್ಥಾನವನ್ನು ದುರ್ಬಳಕೆ ಮಾಡಿ ಕೊಂಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಮತ್ತು ಕೆಟ್ಟ ಸಂದೇಶ ನೀಡುತ್ತದೆ. ಮುಂದೆ ವಿಧಾನಸಭೆಗಳಲ್ಲೂ ಕೂಡ ಹೀಗೆ ಆಗಬಹುದು. ಲೋಕಸಭೆಯಲ್ಲಿ ವಿಚಾರ ಪ್ರಸ್ತಾಪ ಮಾಡುವ ಬಗ್ಗೆ ಗಂಭೀರತೆ ಬೇಕು. ಸದನದ ಪಾವಿತ್ರತ್ಯೆಯನ್ನು ಕಡೆಗಣಿಸಿದ್ದಕ್ಕೆ ಆಕೆಗೆ ಶಿಕ್ಷೆ ಆಗಬೇಕು. ಸಮಿತಿ ನೀಡಿರುವ ವರದಿಗೆ ತಕ್ಕಂತ ಶಿಕ್ಷೆ ಆಗಲೇಬೇಕು ಎಂದು ಸಚಿವೆ ಒತ್ತಾಯಿಸಿದರು.
ಗೂಳಿಹಟ್ಟಿ ತಪ್ಪು ಮಾಹಿತಿ: ಆರ್ಎಸ್ಎಸ್ನಲ್ಲಿ ದಲಿತರ ನಿರ್ಲಕ್ಷ್ಯ ಕುರಿತು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ ಶೋಭಾ, ಗೂಳಿಹಟ್ಟಿ ಆರೆಸ್ಸೆಸ್ಗೆ ಯಾವಾಗ ಬಂದಿದ್ದರು?. ಅವರು ಬಿಜೆಪಿಯ ಸದಸ್ಯರಾಗಿ ದ್ದರು, ಮಂತ್ರಿಯಾಗಿದ್ದವರು, ಆರೆಸ್ಸೆಸ್ ಶಾಖೆಗೆ ಹೋದವರು ಈ ರೀತಿ ಮಾತನಾಡಲು ಸಾಧ್ಯವಿಲ್ಲ ಎಂದರು.
ಎಲ್ಲ ವರ್ಗದವರು ಒಟ್ಟಾಗಿ ಇರಬೇಕು ಅನ್ನೋದು ಆರೆಸ್ಸೆಸ್ ಆಶಯ. ಭಾರತದ ಅಭ್ಯುದಯಕ್ಕೆ ಇದುವೇ ಮಾರ್ಗ ಎಂದು ಆರೆಸ್ಸೆಸ್ ನಂಬಿದೆ. ಗೂಳಿಹಟ್ಟಿ ಶೇಖರ್ ಅವರಿಗೆ ತಪ್ಪು ಮಾಹಿತಿ ಇದೆ, ಅವರು ಸಂಘಕ್ಕೆ ಬರಲಿ ಎಂದರು.