ಮಲ್ಪೆ: ಮೊಬೈಲ್, ಹಣ ಕಳವು ಆರೋಪ; ಕೈ, ಕಾಲು ಕಟ್ಟಿ ಕಾರ್ಮಿಕನಿಗೆ ಅಮಾನುಷವಾಗಿ ಹಲ್ಲೆ
ಮಲ್ಪೆ: ಮೊಬೈಲ್, ಹಣ ಕದ್ದ ಸಂಶಯದ ಮೇರೆಗೆ ಹೊರರಾಜ್ಯದ ಕಾರ್ಮಿಕನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಅಕ್ರಮವಾಗಿ ಬಂಧಿಸಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಡಿ.19ರಂದು ತಡರಾತ್ರಿ ವೇಳೆ ಮಲ್ಪೆಯಲ್ಲಿ ನಡೆದಿದೆ.
ಛತ್ತಿಸ್‌ಗಡದ ರಾಕೇಶ್ ಕುಜೂರ(26) ಹಲ್ಲೆಗೊಳಗಾದ ಕಾರ್ಮಿಕ.
ಇವರು 4 ತಿಂಗಳಿಂದ ಮಲ್ಪೆ ಬಂದರಿನಲ್ಲಿ ದಿನೇಶ್ ಎಂಬವರ ಮಾಲಕತ್ವದ ಮನಸ್ವಿ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, 6-7 ದಿನಗಳ ಹಿಂದೆ ಕೆಲಸ ಬಿಟ್ಟಿದ್ದರು. ರಾಕೇಶ್ ಅವರ ಪರಿಚಯದ ರಂಜನ್ ಕಾರಾವಾರ ಎಂಬಾತ ರಾತ್ರಿ ರಾಕೇಶ್‌ರನ್ನು ಹುಡುಕಿಕೊಂಡು ಬಂದು ಬೈದು ಹೊಡೆದು ಎಳೆದುಕೊಂಡು ಬಾಪುತೋಟದ ಕಡೆಗೆ ಕರೆದುಕೊಂಡು ಹೋಗಿದ್ದನು ಎನ್ನಲಾಗಿದೆ.
ಅಲ್ಲಿ ರಾಕೇಶ್ ಅವರ ಕೈಕಾಲುಗಳಿಗೆ ಹಗ್ಗದಿಂದ ಕಟ್ಟಿ, ಅಕ್ರಮವಾಗಿ ಬಂಧಿಸಿ ಗ್ಲಾಸ್‌ನಿಂದ ತಲೆಗೆ ಹೊಡೆದಿದು ಕೊಲೆಗೆ ಯತ್ನಿಸಿರುವುದಾಗಿ ದೂರಲಾಗಿದೆ. ರಾಕೇಶ್ ಮೊಬೈಲ್, ದುಡ್ಡನ್ನು ಕದ್ದುಕೊಂಡು ಹೋಗಿರುವುದಾಗಿ ರಂಜನ್ ಕಾರಾವಾರ ಸಂಶಯಪಟ್ಟು ಈ ಕೃತ್ಯ ಮಾಡಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.