"ಇನ್ನು ಇಲ್ಲಿ ಕೆಲಸ ಮಾಡುವುದು ಕಷ್ಟ, ಊರಿಗೆ ಹೋಗುತ್ತೇನೆ": ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಹಲ್ಲೆಗೊಳಗಾದ ಸಂತ್ರಸ್ತೆ

ಮಲ್ಪೆ: ‘ಅವತ್ತು ನಾನು ಸ್ವಲ್ಪ ಮೀನು ತೆಗೆದಿದ್ದೆ. ಅದಕ್ಕೆ ಅವರು ಮೀನು ಕದ್ದಿದಾಳೆ ಎಂದು ಹೇಳಿ ನನಗೆ ಹಲ್ಲೆ ಮಾಡಿದರು. ಈ ಘಟನೆ ನಡೆದ ಬಳಿಕ ನಾನು ಬಂದರಿಗೆ ಹೋಗಿಲ್ಲ. ಇನ್ನು ಇಲ್ಲಿ ಕೆಲಸ ಮಾಡುವುದು ಕಷ್ಟ. ಅದಕ್ಕೆ ನಾನು ಊರಿಗೆ ಹೋಗುತ್ತೇನೆ’
ಇದು ಮಲ್ಪೆಬಂದರಿನಲ್ಲಿ ಮಾ.18ರಂದು ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣದ ಸಂತ್ರಸ್ತೆ ಲಕ್ಕೀಬಾಯಿ ಅವರ ಹೇಳಿಕೆ. ಮಲ್ಪೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಅವರ ಮೇಲೆ ಯಾವುದೇ ದ್ವೇಷ ಇಲ್ಲ. ಅವರಿಗೂ ನನ್ನ ಮೇಲೆ ದ್ವೇಷ ಇಲ್ಲ. ಅವರನ್ನು ನನಗೆ ಬಂದರಿನಲ್ಲಿ ನೋಡಿ ಪರಿಚಯ ಇದೆ. ನಾನು ಮಲ್ಪೆಯಲ್ಲಿ ಕಳೆದ ಆರು ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಎಂದರು.
ನಾನು ಅವತ್ತು ಸ್ವಲ್ಪ ಮೀನು ತೆಗೆದಿರುವುದು ಹೌದು. ಮಲ್ಪೆ ಬಂದರಿನಲ್ಲಿ ಆ ರೀತಿ ಮೀನು ತೆಗೆಯುವುದು ಸಹಜ. ಆದರೆ ಅವತ್ತು ಏನೋ ನನ್ನ ಗ್ರಹಚಾರ ಸರಿ ಇರಲಿಲ್ಲ. ಅದಕ್ಕೆ ಏನು ಮಾಡಲು ಆಗಲ್ಲ. ಮೊನ್ನೆಯ ಘಟನೆ ಬಗ್ಗೆ ನನಗೆ ಏನೂ ಹೇಳಲು ಇಲ್ಲ. ನಾವು ನಮ್ಮ ಪಾಡಿಗೆ ದುಡಿದು ತಿನ್ನುತ್ತೇವೆ. ಈಗ ಇಲ್ಲಿ ಇರಲು ನನಗೆ ಆಗಲ್ಲ ಎಂದು ಅವರು ತಿಳಿಸಿದರು.
ಈ ಪ್ರಕರಣದಲ್ಲಿ ಯಾರಿಗೆ ಏನು ಮಾಡುವುದು ಬೇಡ. ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ಇರುತ್ತೇವೆ. ಘಟನೆಯ ಬಳಿಕ ನನಗೆ ಯಾರು ಕೂಡ ತೊಂದರೆ ಕೊಟ್ಟಿಲ್ಲ. ಘಟನೆ ನಡೆದ ದಿನ ರಾತ್ರಿ ಈ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದೆವು. ಪ್ರಕರಣ ದಾಖಲಿಸುವುದು ಬೇಡ ಎಂದು ಮಾತನಾಡಿ ಬಂದಿದ್ದೇವು. ಅದರ ನಂತರ ಮೇಲಿನಿಂದ ಬಂದ ಒತ್ತಡಕ್ಕೆ ಮತ್ತೆ ಕರೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.