ಮಣಿಪಾಲ: ಆಯುರ್ವೇದ ಔಷಧಿ ತಯಾರಿಕಾ ಘಟಕದಲ್ಲಿ ಅವಘಡ: ಐವರಿಗೆ ಗಾಯ
ಮಣಿಪಾಲ, ಅ.19: ಮಣಿಪಾಲ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಕೃಷ್ಣ ಲೈಫ್ ಸೈನ್ಸ್ ಆಯುರ್ವೇದ ಔಷಧಿ ತಯಾರಿಕಾ ಸಂಸ್ಥೆಯ ಪ್ರೊಡಕ್ಷನ್ ವಿಭಾಗದಲ್ಲಿ ಅ.16ರಂದು ಸಂಜೆ ವೇಳೆ ಸಂಭವಿಸಿದ ಅವಘಡದಲ್ಲಿ ಐವರು ನೌಕರರು ಗಾಯಗೊಂಡಿ ರುವ ಬಗ್ಗೆ ವರದಿಯಾಗಿದೆ.
ಗಾಯಗೊಂಡವರನ್ನು ಇಲ್ಲಿನ ಸಿಬ್ಬಂದಿಗಳಾದ ದೀಕ್ಷಿತ್, ಉಮೇಶ್, ದಿನೇಶ್, ಹರೀಶ್ ಹಾಗೂ ಗೋಪಾಲ ಎಂದು ಗುರುತಿಸಲಾಗಿದೆ. ಇವರೆಲ್ಲ ಹೊಸದಾಗಿ ಅಳವಡಿಸಿದ ಔಷಧಿ ಕುದಿಯುತ್ತಿದ್ದ ಕಂಟೇನರ್ ಬಳಿ ಕೆಲಸ ಮಾಡುತ್ತಿದ್ದು, ಈ ವೇಳೆ ಕಂಟೇನರ್‌ನ ಮುಚ್ಚಳ ಒಮ್ಮೆಲೇ ತೆರೆಯಲ್ಪಟ್ಟಿತ್ತು ಎನ್ನಲಾಗಿದೆ. ಇದರಿಂದ ಕುದಿಯುತ್ತಿದ್ದ ಔಷಧಿ ದ್ರಾವಣ ಒಮ್ಮೆಲೇ ರಭಸದಿಂದ ಇವರ ಮೇಲೆ ಚೆಲ್ಲಿತು.
ಇದರ ಪರಿಣಾಮ ಇವರೆಲ್ಲರೂ ಸುಟ್ಟ ಗಾಯಗೊಂಡರೆನ್ನಲಾಗಿದೆ. ಇವರ ಪೈಕಿ ದೀಕ್ಷಿತ್ ಉಮೇಶ್ ಹಾಗೂ ದಿನೇಶ್ ಒಳರೋಗಿಯಾಗಿ ಹಾಗೂ ಹರೀಶ್ ಮತ್ತು ಗೋಪಾಲ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಂಪನಿಯ ಮ್ಯಾನೇಜರ್ ಯೋಗೀಶ್ ನೌಕರರ ಸುರಕ್ಷತೆಯ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ನಿರ್ಲಕ್ಷ್ಯ ವಹಿಸಿರುವುದರಿಂದಲೇ ಈ ಅವಘಡ ಸಂಭವಿಸಿದೆ ಎಂದು ದೂರಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.