ಮಣಿಪಾಲ: ನೇತ್ರದಾನದ ಬಗ್ಗೆ ಜಾಗೃತಿ, ಕಣ್ಣಿಗೆ ಬಟ್ಟೆ ಕಟ್ಟಿ ನಡಿಗೆ
ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಮಣಿಪಾಲ, ಸೆ.2: ನೇತ್ರದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆ ಗಳನ್ನು ಹೋಗಲಾಡಿಸುವ ಉದ್ದೇಶದಿಂದ ಭಾರತದಲ್ಲಿ ಕಳೆದ 38 ವರ್ಷಗಳಿಂದ ಆ.25ರಿಂದ ಸೆ.8ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ಇಂದು 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಸಂಭ್ರಮದಲ್ಲಿ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ಮಣಿಪಾಲ್ ಸ್ಕೂಲ್ ಆಫ್ ಇನ್ಫರ್ಮೇಷನ್ ಸೈನ್ಸ್, ಸಕ್ಷಮ - ಕರ್ನಾಟಕ, ನೇತ್ರಶಾಸ್ತ್ರ ವಿಭಾಗ, ಕಸ್ತೂರ್ಬಾ ಆಸ್ಪತ್ರೆ ಮತ್ತು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಸಹಭಾಗಿತ್ವದಲ್ಲಿ ಸೈಟ್-ಎ-ಥಾನ್ 2023 ಅನ್ನು ಮಣಿಪಾಲದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡಿಗೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಮಾಹೆಯ ಕುಲಪತಿ ಲೆ.ಜ.(ಡಾ)ಎಂ.ಡಿ. ವೆಂಕಟೇಶ್ ಧ್ವಜಾರೋಹಮದ ಮೂಲಕ ಉದ್ಘಾಟಿಸಿದರು. ಈ ವೇಳೆ ಪ್ರೊ ವೈಸ್ ಚಾನ್ಸಲರ್ ಡಾ. ನಾರಾಯಣ ಸಭಾಹಿತ್ ಮತ್ತು ಸಕ್ಷಮ್ ರಾಷ್ಟ್ರೀಯ ಸಂಯೋಜಕ ವಿನೋದ್ ಪ್ರಕಾಶ್ ಆರ್ ಉಪಸ್ಥಿತರಿದ್ದರು.
ಮಣಿಪಾಲ ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಎಂಸಿಎಚ್‌ಪಿ ಡೀನ್ ಡಾ.ಜಿ.ಅರುಣ್ ಮಯ್ಯ, ಮಾಹೆಯ ಬೋಧನಾ ಆಸ್ಪತ್ರೆಯ ಸಿಓಓ ಡಾ. ಆನಂದ್ ವೇಣುಗೋಪಾಲ್, ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ನೇತ್ರವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಯೋಗೀಶ್ ಕಾಮತ್, ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ನಿರ್ದೇಶಕರಾದ ಡಾ.ಕೀರ್ತನಾ ಪ್ರಸಾದ್ ಉಪಸ್ಥಿತರಿದ್ದರು.
ನೇತ್ರಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮನಾಲಿ ಹಜಾರಿಕಾ ನೇತ್ರದಾನದ ಮಹತ್ವದ ಕುರಿತು ಮಾಹಿತಿ ನೀಡಿದರು. ಡಾ.ಕೀರ್ತನಾ ಪ್ರಸಾದ್ ಸ್ವಾಗತಿಸಿ ಸಕ್ಷಮದ ಯೋಜನೆಗಳನ್ನು ಪರಿಚಯಿಸಿದರು. ವಿನೋದ್ ಪ್ರಕಾಶ್ ವಂದಿಸಿದರು.
ಸೈಟ್-ಎ-ಥಾನ್ ನಡಿಗೆ ಮಾಹೆಯ ಎಜ್ಯು ಬಿಲ್ಡಿಂಗ್‌ನ ಪ್ರವೇಶದ್ವಾರ ದಲ್ಲಿ ಪ್ರಾರಂಭಗೊಂಡಿತು. ಅದು ಟೈಗರ್ ಸರ್ಕಲ್, ತುರ್ತು ಚಿಕಿತ್ಸಾ ವಿಭಾಗದ ಮೂಲಕ ಹಾದು, ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗದ ಎದುರು ಮುಕ್ತಾಯಗೊಂಡಿತು. ವೈದ್ಯರು, ವಿದ್ಯಾರ್ಥಿಗಳು, ಸಕ್ಷಮ ಸ್ವಯಂಸೇವಕರು, ಕೆನರಾ ಬ್ಯಾಂಕಿನ ಉದ್ಯೋಗಿಗಳು, ಮಣಿಪಾಲ ಮಹಿಳಾ ಸಮಾಜದ ಸದಸ್ಯೆಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ 1000ಕ್ಕೂ ಅಧಿಕ ಮಂದಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ನಡಿಗೆಯಲ್ಲಿ ಪಾಲ್ಗೊಂಡರು.