ಮಣಿಪಾಲ: ಹೊತ್ತಿ ಉರಿದ ಕಾರು; ಇಬ್ಬರು ಅಪಾಯದಿಂದ ಪಾರು
ಮಣಿಪಾಲ, ಜೂ.28: ಮಣಿಪಾಲ ಎಂಐಟಿ ಸಮೀಪದ ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದು ಜೂ.28ರ ನಸುಕಿನ ವೇಳೆ 1.35ರ ಸುಮಾರಿಗೆ ಬೆಂಕಿ ಅಕಸ್ಮಿಕದಿಂದ ಹೊತ್ತಿ ಉರಿದಿದ್ದು, ಕಾರಿನಲ್ಲಿ ಮಲಗಿದ್ದ ಇಬ್ಬರು ಅಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.
ಬೈಂದೂರು ಕಿರಿಮಂಜೇಶ್ವರದ ಗಣೇಶ್ ಎಂಬವರು ಜೂ.27ರಂದು ರಾತ್ರಿ ವೇಳೆ ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಕರೆತಂದಿದ್ದು, ಬಳಿಕ ಅವರು ಮತ್ತು ಅವರ ಗೆಳೆಯ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಮಲಗಿದ್ದರು. ಈ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚರಗೊಂಡ ಇವರು ಹೊರಗೆ ಬಂದು ಅಪಾಯದಿಂದ ಪಾರಾಗಿದ್ದರು.
ಕಾರು ಬೆಂಕಿಯಿಂದ ಹೊತ್ತಿ ಉರಿದಿದ್ದು, ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸುಮಾರು 3ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
Next Story