ಮಣಿಪಾಲ: ವಿವಿಧ ತರಬೇತಿಯ ಸಮಾರೋಪ
ಮಣಿಪಾಲ, ಅ.21: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಸಹಯೋಗದಲ್ಲಿ 7 ದಿನಗಳ ಕಾಲ ಹಮ್ಮಿಕೊಂಡಿದ್ದ ವಿವಿಧ ಶೈಲಿಯ -ಕೇಶ ವಿನ್ಯಾಸ, ಸೀರೆ ಉಡುವ ಶೈಲಿ, ಮೇಕಪ್ ಮತ್ತು ಬ್ರೈಡಲ್ ಮೆಹಂದಿ- ತರಬೇತಿಯ ಸಮಾರೋಪ ಸಮಾರಂಭ ಇತ್ತೀಚೆಗೆ ಶಿವಳ್ಳಿಯಲ್ಲಿರುವ ಬಿವಿಟಿ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಉಪಪ್ರಧಾನ ವ್ಯವಸ್ಥಾಪಕಿ ಶಿಬಾ ಶಹಜಾನ್ ಮಾತನಾಡಿ ಮಹಿಳೆಯರು ಎಲ್ಲಾ ತರಬೇತಿಗಳಲ್ಲೂ ಭಾಗವಹಿಸಿ ಅನೇಕ ರೀತಿಯ ಕೌಶಲ್ಯಗಳನ್ನು ಕಲಿತು ಆದಾಯದಲ್ಲಿ ಸ್ವಲ್ಪ ಅಂಶವನ್ನು ಉಳಿತಾಯ ಮಾಡಬಹುದು ಎಂದು ತಿಳಿಸಿದರು.
ಕೆನರಾ ಬ್ಯಾಂಕ್‌ನ ಇನ್ನೋರ್ವ ಅಧಿಕಾರಿ ನೈನಾ ಮಾತನಾಡಿ ಬ್ಯಾಂಕಿನಲ್ಲಿ ಸ್ವ-ಉದ್ಯೋಗಕ್ಕೆ ಸಿಗುವ ಸಾಲ-ಸೌಲಭ್ಯ, ವಿಮಾ, ಪಿಂಚಣಿ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ದೀಪಿಕಾ ಅವರು ಮಹಿಳೆಯರು ಈ ರೀತಿಯ ತರಬೇತಿಯ ಸದುಪಯೋಗ ಪಡೆದುಕೊಂಡರೆ ಜೀವನದಲ್ಲಿ ಮುಂದೆ ಯಶಸ್ಸುಗಳಿಸಬಹುದು ಎಂದರು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕೊನೆಯಲ್ಲಿ ಶಿಬಿರಾರ್ಥಿಗಳಿಗೆ ಅತಿಥಿಗಳಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಒಟ್ಟು 37 ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು. ಬಿವಿಟಿಯ ಲಕ್ಷ್ಮೀಬಾಯಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿ, ಗೀತಾ ಆರ್ ರಾವ್ ವಂದಿಸಿದರು.