ಮಣಿಪಾಲ| ಹಾಸ್ಟೆಲ್ಗೆ ನುಗ್ಗಿ ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಸೆರೆ
ನವೀನ್ ನಾಯ್ಕ್
ಮಣಿಪಾಲ, ಸೆ.11: ಅನಂತನಗರದ ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಅಕ್ರಮ ಪ್ರವೇಶಿಸಿ ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸ್ಥಳೀಯ ನಿವಾಸಿ ನವೀನ್ ನಾಯ್ಕ್(22) ಎಂದು ಗುರುತಿಸಲಾಗಿದೆ.
ಈತ ಸೆ.1ರಂದು ನಸುಕಿನ ವೇಳೆ ವಸತಿ ನಿಲಯದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಳಿಕ ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಯೊಬ್ಬಳ ಕೈ ಎಳೆದು ಕಿರುಕುಳ ನೀಡಿ ಪರಾರಿಯಾಗಿದ್ದನು.
ಈ ಬಗ್ಗೆ ವಸತಿ ನಿಲಯದ ವಾರ್ಡನ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ ಎಸ್ಸೈಗಳಾದ ರಾಘವೇಂದ್ರ, ಅಕ್ಷಯ ಕುಮಾರಿ, ಎಎಸ್ಸೈ ವಿವೇಕ್, ಸಿಬ್ಬಂದಿ ಇಮ್ರಾನ್, ಪ್ರಸನ್ನ, ರಘು, ಮಂಜುನಾಥ ಹಾಗೂ ಜ್ಯೋತಿ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತನ ವಿರುದ್ಧ 2023ರಲ್ಲಿ ಉಡುಪಿಯ ಪುತ್ತೂರಿನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.