ಮಣಿಪಾಲ: ಹೋಟೆಲ್ ಕಾರ್ಮಿಕನ ಕತ್ತು ಕೊಯ್ದು ಕೊಲೆ
ಮಣಿಪಾಲ, ಡಿ.6: ಹೋಟೆಲ್ ಕಾರ್ಮಿಕರೊಬ್ಬರನ್ನು ಬಿಯರ್ ಬಾಟಲಿಯಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಮಣಿಪಾಲದ ಅನಂತ ಕಲ್ಯಾಣನಗರದ ಮಾರ್ಗದಲ್ಲಿ ಸಮೀಪ ಇಂದು ಬೆಳಗ್ಗೆ 6ಗಂಟೆ ಸುಮಾರಿಗೆ ನಡೆದಿದೆ.
ಕೊಲೆಗೀಡಾದವರನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಶ್ರೀಧರ್ ನಾಯಕ್(35) ಎಂದು ಗುರುತಿಸಲಾಗಿದೆ. ಇವರು ಹೋಟೆಲೊಂದರಲ್ಲಿ ಬಾಣಸಿಗ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಸ್ಥಳೀಯರು ವಾಕಿಂಗ್ ಹೋಗುವ ಸಂದರ್ಭ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಶ್ರೀಧರ್ ನಾಯಕ್‌ರನ್ನು ಬಿಯರ್ ಬಾಟಲಿಯಿಂದ ಕತ್ತು ಕೊಯ್ದು ಕೊಲೆ ಮಾಡಿರುವುದು ಕಂಡುಬಂದಿದೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್, ಹೆಚ್ಚುವರಿ ಎಸ್ಪಿಗಳಾದ ಎಸ್.ಟಿ.ಸಿದ್ದಲಿಂಗಯ್ಯ, ಪರಮೇಶ್ವರ್, ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಾದರು.