ಮಣಿಪಾಲ ಕೆಎಂಸಿ ಕ್ಲಿನಿಕಲ್ ಭ್ರೂಣಶಾಸ್ತ್ರ ಕೇಂದ್ರಕ್ಕೆ ಜರ್ಮನಿಯಿಂದ ‘ಸೆಂಟರ್ ಆಫ್ ಎಕ್ಸಲೆನ್ಸ್’ ಮಾನ್ಯತೆ
ಮಣಿಪಾಲ, ಅ.20: ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸುಧಾರಿತ ಜಾಗತಿಕ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಶ್ರಮಿಸುತ್ತಿರುವ ಪ್ರತಿಷ್ಠಿತ ಮರ್ಕ್ ಫೌಂಡೇಶನ್ ಸಂಸ್ಥೆಯು ಮಣಿಪಾಲ ಕೆಎಂಸಿಯ ಕ್ಲಿನಿಕಲ್ ಭ್ರೂಣಶಾಸ್ತ್ರ ಕೇಂದ್ರ ಕ್ಲಿನಿಕಲ್ ಎಂಬ್ರಿಯಾಲಜಿ ಕೇಂದ್ರಕ್ಕೆ ‘ಸೆಂಟರ್ ಆಫ್ ಎಕ್ಸಲೆನ್ಸ್’ ಮಾನ್ಯತೆ ನೀಡಿ ಗೌರವಿಸಿದೆ.
ಸೌಲಭ್ಯವಂಚಿತ ಸಮುದಾಯಗಳಿಗೆ ಆರೋಗ್ಯಸೇವೆಯನ್ನು ನೀಡುವಲ್ಲಿ ಮರ್ಕ್ ಫೌಂಡೇಶನ್ ಹೆಚ್ಚಿನ ಮುತುವರ್ಜಿ ತೋರಿಸುತ್ತಿದೆ. ಇದು ಅನೇಕ ಆಫ್ರಿಕನ್ ಸಂಸ್ಥೆಗಳೊಂದಿಗೆ ಈ ಬಗ್ಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಸಾಕಷ್ಟು ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿ ಸುಧಾರಿತ ಫಲವಂತಿಕೆಯ ಆರೈಕೆಯ ಅಗತ್ಯದ ಕಡೆ ಇದು ಗಮನಹರಿಸುತ್ತಿದೆ.
ಸಾಮರ್ಥ್ಯ-ನಿರ್ಮಾಣದ ಯೋಜನೆಗಳಲ್ಲಿ ಮಣಿಪಾಲ ಕೆಎಂಸಿಯಲ್ಲಿ ರುವ ಶುಶ್ರೂಷಾ ಭ್ರೂಣಶಾಸ್ತ್ರ ಕ್ಲಿನಿಕಲ್ ಎಂಬ್ರಿಯಾ ಲಜಿ ಕೇಂದ್ರವು 2017ರಿಂದ ಪ್ರಮುಖ ಜಾಗತಿಕ ಮಟ್ಟದ ಸಹಭಾಗಿ ಸಂಸ್ಥೆಯಾಗಿದೆ. ಮರ್ಕ್ ಫೌಂಡೇಶನ್ ಮತ್ತು ಮಣಿಪಾಲದ ಕೆಎಂಸಿ ಜಂಟಿ ಸಹಕಾರದಿಂದ 27 ದೇಶಗಳಲ್ಲಿ ಸುಮಾರು ನೂರು ವೈದ್ಯರು ಮತ್ತು ವಿಜ್ಞಾನಿಗಳು ಉನ್ನತ ಮಟ್ಟದ ಭ್ರೂಣಶಾಸ್ತ್ರ ತರಬೇತಿಯನ್ನು ಮಣಿಪಾಲದಲ್ಲಿ ಪಡೆದಿದ್ದಾರೆ. ಇಲ್ಲಿ ತರಬೇತಿ ಪಡೆದ ವೃತ್ತಿಪರರು ಬೇರೆ ಬೇರೆ ದೇಶಗಳಲ್ಲಿ ಬಂಜೆತನ ನಿರ್ವಹಣಾ ಕಾರ್ಯ ದಲ್ಲಿ ಮುಂಚೂಣಿಯಲ್ಲಿದ್ದಾರೆ.
ಗುರುವಾರ ಅ.18ರಂದು ಮುಂಬೈಯಲ್ಲಿ ನಡೆದ ಮರ್ಕ್- ಆಫ್ರಿಕಾ- ಏಷ್ಯಾ ಸಮಾವೇಶದಲ್ಲಿ ಮಾನ್ಯತಾ ಪತ್ರವನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮರ್ಕ್ ಫೌಂಡೇಶನ್‌ನ ಸಿಇಓ ಸೆನೆಟರ್ ಡಾ. ರಾಶಾ ಕಿಲೇಜ್, ಇ-ಮರ್ಕ್-ಕೆಜಿಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಡಾ.ಫ್ರ್ಯಾಂಕ್ ಸ್ಟ್ಯಾಂಜನ್ಬರ್ಗ್-ಹ್ಯಾವರ್‌ಕಾಂಪ್, 14 ಆಫ್ರಿಕನ್ ದೇಶಗಳ ಪ್ರಥಮ ಪ್ರಜೆಯ ಪತ್ನಿಯರು ಉಪಸ್ಥಿತರಿದ್ದರು.
ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್, ಮಣಿಪಾಲ ಕೆಎಂಸಿಯ ಕ್ಲಿನಿಕಲ್ ಭ್ರೂಣಶಾಸ್ತ್ರ ಯೋಜನೆಗಳ ಮುಖ್ಯಸ್ಥ ಡಾ. ಸತೀಶ್ ಅಡಿಗ ಈ ಪುರಸ್ಕಾರವನ್ನು ಸ್ವೀಕರಿಸಿದರು.
ಮಣಿಪಾಲ ಕೆಎಂಸಿಯ ಕ್ಲಿನಿಕಲ್ ಎಂಬ್ರಿಯಾಲಜಿ ಕೇಂದ್ರದ ಏಷ್ಯಾದ ಪ್ರಮುಖ ಐವಿಎಫ್-ಎಂಬ್ರಿಯಾಲಜಿ ಕೇಂದ್ರವಾಗಿ ಪರಿಗಣಿತವಾಗಿದ್ದು, ಬಂಜೆತನದಿಂದ ಬಳಲುತ್ತಿರುವ ದಂಪತಿಗಳಿಗೆ ನೆರವಾಗುವುದಕ್ಕಾಗಿ ಜಗತ್ತಿನ ನೂರಾರು ವೈದ್ಯರು ಮತ್ತು ವಿಜ್ಞಾನಿಗಳನ್ನು ಸಜ್ಜುಗೊಳಿಸಿದೆ.