ಮಣಿಪಾಲ: ಐಎಡಿವಿಎಲ್‌ನ ರಾಜ್ಯ ಸಮ್ಮೇಳನ
ಉಡುಪಿ : ಮಾಹೆ ಅಧೀನಕ್ಕೊಳಪಟ್ಟ ಕೆಎಂಸಿ ಮಣಿಪಾಲದ ಚರ್ಮರೋಗ ವಿಭಾಗವು ಕರಾವಳಿ ಡರ್ಮಟಾಲಜಿ ಸೊಸೈಟಿ (ಕೆಡಿಎಸ್) ಇದರ ಸಹಯೋಗದೊಂದಿಗೆ ಇದೇ ಅ.27ರಿಂದ 29ರವರೆಗೆ ಮಣಿಪಾಲದ ಡಾ.ಟಿಎಂಎ ಪೈ ಹಾಲ್‌ನಲ್ಲಿ ಐಎಡಿವಿಎಲ್ (ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್, ವೆನೆರಿಯೊಲೊಜಿಸ್ಟ್ ಆ್ಯಂಡ್ ಲೆಪ್ರೋಲಜಿಸ್ಟ್)ನ ಕರ್ನಾಟಕ ಶಾಖೆಯ ೧೪ನೇ ವಾರ್ಷಿಕ ರಾಜ್ಯ ಸಮ್ಮೇಳನವನ್ನು ಆಯೋಜಿಸಿದೆ ಎಂದು ಕೆಎಂಸಿ ಚರ್ಮರೋಗ ವಿಭಾಗದ ಪ್ರಾಧ್ಯಾಪಕ ಹಾಗೂ ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷ ಡಾ.ಸತೀಶ್ ಪೈ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೩ವರ್ಷಗಳ ನಂತರ ಮಣಿಪಾಲದಲ್ಲಿ ಈ ಸಮ್ಮೇಳನ ವನ್ನು ಆಯೋಜಿಸ ಲಾಗುತ್ತಿದೆ. ಚರ್ಮಶಾಸ್ತ್ರವು ವೈದ್ಯಕೀಯ ಶಾಸ್ತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯು ತ್ತಿರುವ ಉಪ-ವಿಶೇಷತೆಗಳಲ್ಲಿ ಒಂದಾಗಿದ್ದು, ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಹೆಚ್ಚು ಬೇಡಿಕೆಯಿರುವ ಶಾಖೆಗಳಲ್ಲಿ ಒಂದಾಗಿದೆ ಎಂದರು.
ಕೆಎಂಸಿ ಚರ್ಮರೋಗ ವಿಭಾಗದ ಮುಖ್ಯಸ್ಥಲ ಡಾ.ರಾಘವೇಂದ್ರ ರಾವ್ ಅವರು ಮಾತನಾಡಿ, ಈ ಬಾರಿ ಮೂರು ದಿನಗಳ ಸಮ್ಮೇಳನದಲ್ಲಿ ನಾಲ್ವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶೇಷಜ್ಞರು ಸಂಪನ್ಮೂಲ ಭಾಷಣಕಾರರಾಗಿ ಆಗಮಿಸುತಿದ್ದಾರೆ. ಬೋಸ್ಟನ್ ವಿವಿಯ ಡಾ.ರಜಾಕ್ ಅಹ್ಮದ್ ಇವರಲ್ಲೊಬ್ಬರು. ಡರ್ಮಟಾಲಜಿಯಲ್ಲಿ ಅವರ ಸಾಧನೆಗಾಗಿ ಐಎಡಿವಿಎಲ್ ಕರ್ನಾಟಕ ಶಾಖೆಯು ‘ಚರಕ ಪ್ರಶಸ್ತಿ’ ನೀಡಿ ಗೌರವಿಸಲಿದೆ ಎಂದರು.
ಮತ್ತೊಬ್ಬರು ಯುಬ್ರಿಟನ್‌ನ ಸೇಂಟ್ ಜಾನ್ಸ್ ಇನ್‌ಸ್ಟಿಟ್ಯೂಟ್ ಆಫ್ ಡರ್ಮಟಾಲಜಿಯ ಪ್ರೊ.ಜೆಮಿಮಾ ಮೆಲ್ಲಿರಿಯೊ. ಅಲ್ಲದೇ ವೇಲ್ಸ್ ವಿವಿಯ ತಜ್ಞ ಡಾ. ಮಂಜುನಾಥ್ ಅವರು ಸೋರಿಯಾಸಿಸ್ ಮತ್ತು ಎಸ್ಜಿಮಾ ಕುರಿತು ಮಾತನಾಡಲಿ ದ್ದಾರೆ. ದುಬೈನ ಡಾ.ಶ್ರೀಕುಮಾರ್ ಸೋರಿಯಾಸಿಸ್ ನಿರ್ವಹಣೆ ಯಲ್ಲಿ ಹೊಸ ಔಷಧದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ ಎಂದರು.
ಅಲ್ಲದೇ ಚಂಡೀಗಢ, ಪಾಂಡಿಚೇರಿ, ಕೋಲ್ಕತ್ತಾ, ವೆಲ್ಲೂರು, ಚೆನ್ನೈ ಮತ್ತು ಅಹಮದಾಬಾದ್‌ಗಳಿಂದಲ್ಲೂ ತಜ್ಞರು ಭಾಗವ ಹಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಸಮ್ಮೇಳನದಲ್ಲಿ 600ಕ್ಕೂ ಅಧಿಕ ಮಂದಿ ಭಾಗವಹಿ ಸಲಿದ್ದಾರೆ ಎಂದು ಡಾ.ರಾವ್ ತಿಳಿಸಿದರು.
ಸಮ್ಮೇಳನದಲ್ಲಿ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಜೀವಮಾ ನದ ಸಾಧನೆಯ ಪ್ರಶಸ್ತಿ, ಅತ್ಯುತ್ತಮ ಸಮುದಾಯ ಸೇವೆ, ಯುವ ಚರ್ಮರೋಗ ವೈದ್ಯ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಅ.28ರಂದು ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದೂ ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಡಾ.ಲೋಕೇಶ್ ರಾವ್, ಡಾ.ಶ್ರೀಪತಿ ಎಚ್, ಜಂಟಿ ಸಂಘಟನಾ ಕಾರ್ಯ ದರ್ಶಿ ಡಾ.ಸನತ್ ಹಾಗೂ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.