ಮಣಿಪಾಲ: ಮೂವರು ಗಾಂಜಾ ಪೆಡ್ಲರ್ ವಿದ್ಯಾರ್ಥಿಗಳ ಬಂಧನ
1.10ಲಕ್ಷ ರೂ. ಮೌಲ್ಯದ 2.100 ಕೆ.ಜಿ ಗಾಂಜಾ ವಶ
ಉಡುಪಿ, ಜು.25: ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಜು.25ರಂದು ಮಣಿಪಾಲ ವಿದ್ಯಾರತ್ನ ಹಾಗೂ ಸರಳೇಬೆಟ್ಟುವಿನ ವಸತಿ ಸಮುಚ್ಛಯಗಳಿಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಮೂವರು ಗಾಂಜಾ ಪೆಡ್ಲರ್ ವಿದ್ಯಾರ್ಥಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಿಹಾರ್ ಪಟ್ನಾದ ಆಯುಶ್‌ರಾಜ್(21), ಹೈದರಬಾದಿನ ವಿನಯ್ ಕುಮಾರ್ ಸಿಂಗ್(20), ಉತ್ತರ ಪ್ರದೇಶ ಲಕ್ನೋದ ಮಯಾಸ್ ಚಂದೆಲ್ (18) ಬಂಧಿತ ಆರೋಪಿಗಳು. ಇವರೆಲ್ಲ ಮಣಿಪಾಲ ಎಂಐಟಿ ಮೂರನೇ ವರ್ಷದ ಇಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಂದ 1.10ಲಕ್ಷ ರೂ. ಮೌಲ್ಯದ ಸುಮಾರು 2.100ಕೆ.ಜಿ. ಗಾಂಜಾ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಪೆಡ್ಲರ್ಸ್‌ಗಳಾದ ಆಯುಷ್ ರಾಜ್ ಮತ್ತು ಮಯಾಸ್ ಚಂದೆಲ್ ಆತನ ಸ್ನೇಹಿತ ಶ್ರೀಕಾಂತ್ ನಿಂದ ಗಾಂಜಾ ಪಡೆದು, ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಶೇಖರಿಸಿ ಇಟ್ಟಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮಾದಕ ವಸ್ತುಗಳ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ.
ಎಸ್ಪಿ ಅಕ್ಷಯ್ ಮಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ, ಡಿವೈಎಸ್ಪಿ ದಿನಕರ ಕೆ.ಪಿ. ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ ಎಸ್ಸೈ ಅಬ್ದುಲ್ ಖಾದರ್, ಅಬಕಾರಿ ಇಲಾಖೆಯ ಡಿವೈಎಸ್‌ಪಿ ಅಶೋಕ್ ಎಚ್. ಹಾಗೂ ಮಣಿಪಾಲ ಠಾಣಾ ಸಿಬ್ಬಂದಿ ಅಬ್ದುಲ್ ರಝಾಕ್, ಇಮ್ರಾನ್, ಚೆನ್ನೇಶ್, ಮಂಜುನಾಥ್ ಜೈನ್ ಹಾಗೂ ಆನಂದ ಹಾಗೂ ಎಸ್ಪಿ ಕಚೇರಿಯ ತಾಂತ್ರಿಕ ಸಿಬ್ಬಂದಿ ದಿನೇಶ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.