ಮಣಿಪಾಲ: ಕೆಎಂಸಿಯಲ್ಲಿ ವಿಶ್ವ ಮೆದುಳು ದಿನಾಚರಣೆ
ಮಣಿಪಾಲ, ಜು.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗ ಶನಿ ಮೆದುಳಿನ ಆರೋಗ್ಯ ಜಾಗೃತಿ ಶಿಕ್ಷಣ ಕಾರ್ಯಕ್ರಮದ ಮೂಲಕ ವಿಶ್ವ ಮೆದುಳಿನ ದಿನವನ್ನು ಆಚರಿಸಿತು. ಪ್ರತಿ ವರ್ಷ ಜುಲೈ 22ನ್ನು ವಿಶ್ವ ಮೆದುಳಿನ ದಿನವನ್ನಾಗಿ ಆಚರಿಸಲಾಗುತ್ತದೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಎಂಸಿಯ ಡೀನ್ ಡಾ.ಪದ್ಮರಾಜ ಹೆಗ್ಡೆ ಮಾತನಾಡಿ, ಮೆದುಳು ಮಾನವ ದೇಹದ ಬಹು ಮುಖ್ಯ ಅಂಗವಾಗಿದೆ, ನಮ್ಮ ಭಾವನೆಗಳು, ಆಲೋಚನೆಗಳು ಮತ್ತು ಎಲ್ಲಾ ಕ್ರಿಯೆಗಳಿಗೆ ಇದು ಕಾರಣವಾಗಿದೆ. ಮೆದುಳಿನ ಆರೋಗ್ಯ ವನ್ನು ಕಾಪಾಡಿಕೊಂಡರೆ, ದೇಹದ ಆರೋಗ್ಯವನ್ನು ಕಾಪಾಡಿಕೊಂಡಂತೆ. ಆದ್ದರಿಂದ ಉತ್ತಮ ಸಮತೋಲಿತ ಆಹಾರ ಮತ್ತು ವ್ಯಾಯಾಮದ ಮೂಲಕ ಮೆದುಳಿನ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರು.
ಇದನ್ನು ಗಮನಿಸಿ ವಿಶ್ವ ಆರೋಗ್ಯ ಸಂಸ್ಥೆಯು ಮೆದುಳಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಪ್ರತೀ ವರ್ಷ ಜುಲೈ 22ರಂದು ಮೆದುಳು ದಿನವ ನ್ನಾಗಿ ಆಚರಿಸುತ್ತದೆ. ಈ ವರ್ಷದ ಘೋಷ ವಾಕ್ಯ ‘ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ’. ಇದು ವಿಕಲಾಂಗ ವ್ಯಕ್ತಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯವನ್ನು ಒದಗಿಸುವ ಅಗತ್ಯತೆಯನ್ನು ಒತ್ತಿ ಹೇಳುತ್ತದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ ಶೆಟ್ಟಿ ಮಾತನಾಡಿ, ಮೆದುಳಿನ ಕಾಯಿಲೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳಿಗೆ ಇಂದು ಚಿಕಿತ್ಸೆ ಲಭ್ಯವಿದೆ. ಆದರೆ ಅದು ಬೇಗ ಪತ್ತೆ ಹಚ್ಚಿ ಸಕಾಲದಲ್ಲಿ ದೊರೆಯಬೇಕು. ಮೆದುಳಿನ ಚಿಕಿತ್ಸೆಗೆ ಸಂಬಂದಿತ ಹೊಸ ತಂತ್ರಜ್ಞಾನಗಳು, ತಜ್ಞ ವೈದ್ಯರು, ವಿಶೇಷ ವಿಭಾಗಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಲಭ್ಯವಿದೆ ಎಂದು ಹೇಳಿದರು.
ಗೌರವ ಅತಿಥಿ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಮೆದುಳಿನ ಆರೋಗ್ಯದ ಕುರಿತಾದ ಭಿತ್ತಿಪತ್ರ ( ಪೋಸ್ಟರ್) ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.
ಕೆಎಂಸಿಯ ನರರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥ ರಾದ ಡಾ.ಅಪರ್ಣಾ ಆರ್.ಪೈ ಮೆದುಳಿನ ದಿನದ ಜಾಗೃತಿ ಅಂಗವಾಗಿ ಆಸ್ಪತ್ರೆಯ ಫೇಸ್ಬುಕ್ ಜಾಲತಾಣದಲ್ಲಿ ಮೆದುಳು ಆರೋಗ್ಯದ ಕುರಿತು ಸರಣಿ ಮಾತು ಇಂದು ಬಿತ್ತರಗೊಳ್ಳೊತ್ತಿದೆ ಎಂದರು.
ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ರಾಘವೇಂದ್ರ ನಾಯಕ ಮೆದುಳಿನ ಕಾರ್ಯದ ಕುರಿತು ಮಾತನಾಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಶ್ರೀಪದ್ಮ ಪಿ ವಿ ಕಾರ್ಯಕ್ರಮ ನಿರೂಪಿಸಿದರು.