ದಸಂಸದಿಂದ ಮಂಜುನಾಥ ಗಿಳಿಯಾರು ಉಚ್ಛಾಟನೆ: ರಾಜಶೇಖರ್ ಕೋಟೆ
ಉಡುಪಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಮತ್ತು ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ಅವರನ್ನು ರಾಜ್ಯ ಸಮಿತಿಯ ಆದೇಶದ ಮೇರೆಗೆ ಉಚ್ಚಾಟಿಸಿರುವುದಾಗಿ ಮೈಸೂರು ವಿಭಾಗೀಯ ಸಂಚಾಲಕ ರಾಜಶೇಖರ್ ಕೋಟೆ ತಿಳಿಸಿದ್ದಾರೆ.
ಈ ಇಬ್ಬರು ಇತ್ತೀಚೆಗೆ ನಿರಂತರ ಸಂಘಟನಾ ವಿರೋಧಿ ಚಟುವಟಿಕೆ ಮತ್ತು ವೈಯಕ್ತಿಕ ಲಾಭಕ್ಕೆ ಹೆಚ್ಚಿನ ಮಹತ್ವ ನೀಡಿ ಸಂಘಟನೆಯ ಸಿದ್ಧಾಂತಕ್ಕೆ ಹಾನಿ ಎಸಗಿರುವುದಲ್ಲದೆ, ತಮ್ಮ ನಾಯಕತ್ವಕ್ಕಾಗಿ ಇನ್ನೊಂದು ಸಂಘಟನೆಯ ನಾಯಕರ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡು ಗ್ರಾಮೀಣ ಪ್ರದೇಶದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪತ್ರಿಕೆಗಳಿಗೆ ಬಿಡುಗಡೆ ಗೊಳಿಸಿದ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಉಡುಪಿ ಜಿಲ್ಲೆಯಲ್ಲಿ ಆಯೋಜಿಸಿದ ಭಾರತ ಭಾಗ್ಯವಿಧಾತ ಅಂಬೇಡ್ಕರ್ ಜನ್ಮ ದಿನಾಚರಣೆಗೆ ಸಂಗ್ರಹವಾದ ಲಕ್ಷಾಂತರ ಹಣದ ಲೆಕ್ಕಾಚಾರವನ್ನು ಚುಕ್ತಮಾಡದೆ ವಂಚಿಸಿರುವ ಆರೋಪವೂ ಕೇಳಿಬರುತ್ತಿದ್ದು, ಜೊತೆಗೆ ಸಂಘಟನೆಯ ಹೆಸರಿನಲ್ಲಿ ಬಡಪಾಯಿ ಜನರನ್ನು ದಿಕ್ಕುತಪ್ಪಿಸು ತ್ತಿರುವ ಈ ಇಬ್ಬರನ್ನು ಮುಂದಿನ ಮೂರು ವರ್ಷಗಳ ಕಾಲ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಉಚ್ಛಾಟಿಸಲಾಗಿದೆ ಎಂದು ರಾಜಶೇಖರ್ ಕೋಟೆ ವಿವರಿಸಿದ್ದಾರೆ.
ಪದೇ ಪದೇ ಸಂಘಟನೆಯಿಂದ ಸಂಘಟನೆಗೆ ಹಾರುವ ಗಿಳಿಯಾರು ತನ್ನನ್ನು ಪೋಷಿಸಿದವರಿಗೆ ಮತ್ತು ದಲಿತ ಚಳಚಳಿ ಯಲ್ಲಿ ಬೆಳೆಸಿದವರಿಗೆ ದ್ರೋಹ ಬಗೆಯುತ್ತಾ ಅವರ ತೇಜೋವಧೆ ಮಾಡಿ, ಇಡೀ ಜಿಲ್ಲೆಯಲ್ಲಿ ತಾನೊಬ್ಬನೇ ಪ್ರಾಮಾಣಿಕ ನಾಯಕ ಎನ್ನುತ್ತಾ, ಗ್ರಾಮೀಣ ಭಾಗದ ಸಂಘಟನೆಯ ಕಾರ್ಯಕರ್ತರನ್ನು ವಂಚಿಸುತ್ತಿದ್ದಾರೆ ಎಂದು ರಾಜಶೇಖರ್ ಕೋಟೆ ಆರೋಪಿಸಿದ್ದಾರೆ.
ಮಂಜುನಾಥ ಗಿಳಿಯಾರು ಸ್ಪಷ್ಟೀಕರಣ
ರಾಜಶೇಖರ್ ಕೋಟೆ ಅವರ ಹೇಳಿಕೆ ಹಾಗೂ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಜಿಲ್ಲೆಯ ಹಿರಿಯ ದಸಂಸ ನಾಯಕ ಹಾಗೂ ನ್ಯಾಯವಾದಿ ಮಂಜುನಾಥ ಗಿಳಿಯಾರ್, ಈ ಸಂಘಟನೆಗೆ ತಾನು ಆರು ತಿಂಗಳ ಹಿಂದೆಯೇ ರಾಜಿನಾಮೆ ನೀಡಿದ್ದು, ಕಳೆದ ಆರು ತಿಂಗಳಿನಿಂದ ದಸಂಸ ಸಮಿತಿಯ ಯಾವುದೇ ಚಟವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಶೋಷಿತರ ಚಳವಳಿಯನ್ನು ಹೆಚ್ಚು ವಿಸ್ತರಿಸಿ, ವಂಚಿತ ಸಮುದಾಯಗಳಿಗೆ ಶಕ್ತಿ ತುಂಬಲು ತಾನು ಬೇರೆ ಮಾದರಿಯಲ್ಲಿ ಸಕ್ರೀಯನಾಗಿದ್ದೇನೆ.ದಲಿತ ಚಳವಳಿಯಿಂದ ತಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ೬ ತಿಂಗಳ ಹಿಂದೆಯೇ ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸಮಿತಿಯಾಗಲೀ, ರಾಜಶೇಖರ ಕೋಟೆಯಾಗಲಿ ತನ್ನನ್ನು ಉಚ್ಛಾಟಿ ಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗಿಳಿಯಾರು ತಿಳಿಸಿದ್ದಾರೆ.
ರಾಜಶೇಖರ ಕೋಟೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಲ್ಲಿ ಯಾವುದೇ ಅಧಿಕೃತ ಹುದ್ದೆಯಲ್ಲಿ ಇಲ್ಲದೇ ಇರುವುದರಿಂದ ಅವರ ಪತ್ರಿಕಾ ಹೇಳಿಕೆಗೆ ಕಾರ್ಯಕರ್ತರು ಮನ್ನಣೆ ನೀಡಬೇಕಾಗಿಲ್ಲ ಎಂದೂ ಗಿಳಿಯಾರು ‘ವಾರ್ತಾಭಾರತಿ’ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.