ಅ.4ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ: ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳ ಮಾಲಕರ ಒಕ್ಕೂಟ
ಉಡುಪಿ, ಅ.1: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲ ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿ ಗಳು ಲಿಖಿತ ರೂಪದಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದನೆ ನೀಡಬೇಕು. ಇದಕ್ಕೆ ಒತ್ತಾಯಿಸಿ ಅ.4ರಂದು ಉಡುಪಿ ಜೋಡು ಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಮತ್ತು ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟದ ಪ್ರಮುಖ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಉದ್ಯಾವರ ಬಲಾಯಿಪಾದೆಯ ಮುಷ್ಕರ ನಿರತ ಸ್ಥಳದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾಡಳಿತ ಸೂಚಿಸದ ಎಲ್ಲ ಮಾರ್ಗಸೂಚಿಗಳ ಅನ್ವಯ ಕಾರ್ಯನಿರ್ವಹಿಸಿದ್ದೇವೆ. ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳಿಗೆ ಜಿಪಿಎಸ್ ಅಳವಡಿಸಲು ನಾವು ಸಿದ್ಧರಿದ್ದೇವೆ ಎಂದರು.
ಈಗ ‘ಒನ್ ಸ್ಟೇಟ್ ಒನ್ ಜಿಪಿಎಸ್’, ಮುಂದೆ ‘ಒನ್ ನೇಷನ್ ಒನ್ ಜಿಪಿಎಸ್’ ಹೇಳಿ ಜಿಪಿಎಸ್ ಅಳವಡಿಸಲು ಹೇಳಬಹುದು. ಜಿಪಿಎಸ್ ಅಳವಡಿಸಲು ಸಾವಿರಾರು ರೂ. ಹಣ ಬೇಕಾಗಿರುವುದರಿಂದ ಬಡ ಲಾರಿ ಮಾಲಕರಿಗೆ ಮತ್ತಷ್ಟು ಹೊರೆಯಾಗುತ್ತದೆ. ಆದುದರಿಂದ ಈ ಕುರಿತು ನಮ್ಮ ಜೊತೆ ಮಾತುಕತೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗಣಿ ಇಲಾಖೆಯವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸಕ್ರಮವಾಗಿ ಮರಳು ಸಾಗಾಟ ಮಾಡಲು ಅವಕಾಶ ನೀಡುವಂತೆ ಕೇಳಿ ಕೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ ಶೇ.99ರಷ್ಟು ಕೆಂಪು ಹಾಗೂ ಶಿಲೆ ಕಲ್ಲುಗಳಿಗೆ ಪರವಾನಿಗೆಯೇ ಇಲ್ಲ. ಈ ವ್ಯವಸ್ಥೆಯಲ್ಲಿ ನಾವು ಜಿಪಿಎಸ್ ಹಾಕಿ ಏನು ಮಾಡಬೇಕು. ಆದುದ ರಿಂದ ಕಾನೂನು ಗೌರವಿಸಿ ಮುಷ್ಕರ ನಡೆಸುತ್ತಿದ್ದೇವೆ. ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರೆಯ ಲಿದೆ ಎಂದು ಅವರು ಹೇಳಿದರು.
ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಲಾರಿ ಮಾಲಕರಿಗೆ ಸಂಕಷ್ಟ ಉಂಟು ಮಾಡಲಾಗುತ್ತಿದೆ. ಈ ಮೂಲಕ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಡಲಾಗುತ್ತಿದೆ. ಅದನ್ನು ಬಿಟ್ಟು ಅಕ್ರಮವಾಗಿ ದಂಧೆ ನಡೆಸುವ ನಿಜವಾದ ದಂಧೆಕೋರರನ್ನು ಮಟ್ಟಹಾಕಬೇಕು. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಮನೋಹರ ಕುಂದರ್, ರಮೇಶ್ ಶೆಟ್ಟಿ ಹೆರ್ಗ, ರಾಜೇಶ್, ಕೃಷ್ಣ ಅಂಬಲಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸರಿಂದ ವಾಹನಗಳಿಗೆ ನೋಟೀಸ್!
ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ನಿಲ್ಲಿಸಲಾಗಿರುವ ಲಾರಿ ಹಾಗೂ ಟೆಂಪೋಗಳನ್ನು ಕೂಡಲೇ ತೆರವುಗೊಳಿಸುವಂತೆ ನೋಟೀಸ್ಗಳನ್ನು ರಸ್ತೆ ಬದಿ ನಿಲ್ಲಿಸಿದ ವಾಹನಗಳಿಗೆ ಪೊಲೀಸರು ಅಂಟಿಸಿರುವುದು ಕಂಡುಬಂದಿದೆ.
ಲಾರಿ, ಟೆಂಪೋಗಳಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ, ಶಾಲಾ ಮಕ್ಕಳ ವಾಹನಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದ್ದು, ಈ ಕೂಡಲೇ ಅಧಿಕೃತವಾಗಿ ನಿಲ್ಲಿಸಿದ ಲಾರಿ, ಟೆಂಪೋಗಳನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ವಾಹನಗಳನ್ನು ತೆರವುಗೊಳಿಸಲಾಗುವುದೆಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಒಕ್ಕೂಟದ ಪ್ರಮುಖ ರಾಘವೇಂದ್ರ ಶೆಟ್ಟಿ, ನಮ್ಮ ವಾಹನಗಳಿಗೆ ಪೊಲೀಸರು ನೋಟೀಸ್ ಹಾಕಿದ್ದಾರೆ. ಆದರೆ ನಾವು ಪ್ರತಿಭಟನೆ ನಡೆಸುತ್ತಿರುವುದು ನಮ್ಮ ನೋವು ಹೇಳಿಕೊಳ್ಳಲು. ಆ ಅಧಿಕಾರ, ಸ್ವಾತಂತ್ರ್ಯ ನಮಗೆ ಇಲ್ಲವೇ ಎಂದು ಪ್ರಶ್ನಿಸಿದರು. ಕಳೆದ 21 ದಿನಗಳಿಂದ ವಾಹನ ನಮ್ಮ ಮನೆಯಲ್ಲಿ ನಿಲ್ಲಿಸಿ, ಇದೀಗ ಸಾರ್ವಜನಿ ಕರಿಗೆ ನಮ್ಮ ನೋವು, ಕಷ್ಟ ಗೊತ್ತಾಗಲಿ ಎಂದು ಇಲ್ಲಿ ತಂದು ನಿಲ್ಲಿಸಿದ್ದೇವೆ. ನಮ್ಮ ವಾಹನಗಳನ್ನು ಸೀಝ್ ಮಾಡಿ ಪ್ರಕರಣ ದಾಖಲಿಸಿದರೆ ಜೈಲಿಗೆ ಹೋಗಲೂ ಸಿದ್ಧ ಎಂದರು.