ಕುಂದಾಪುರ ಪುರಸಭೆ ಅಧ್ಯಕ್ಷರಾಗಿ ಮೋಹನ್‌ದಾಸ್ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ ಆಯ್ಕೆ
ಕುಂದಾಪುರ: ಕುಂದಾಪುರ ಪುರಸಭೆಯ ನೂತನ ಅಧ್ಯಕ್ಷರಾಗಿ ಸೆಂಟ್ರಲ್ ವಾರ್ಡ್‌ನ ಬಿಜೆಪಿ ಸದಸ್ಯ ಮೋಹನ್‌ದಾಸ್ ಶೆಣೈ ಹಾಗೂ ಉಪಾಧ್ಯಕ್ಷೆಯಾಗಿ ಶಾಂತಿನಿಕೇತನ ವಾರ್ಡ್‌ನ ಬಿಜೆಪಿಯ ಸದಸ್ಯೆ ವನಿತಾ ಬಿಲ್ಲವ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೋಹನ್‌ದಾಸ್ ಶೆಣೈ ಹಾಗೂ ಕಾಂಗ್ರೆಸ್‌ನಿಂದ ಚಂದ್ರಶೇಖರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಯಿಂದ ವನಿತಾ ಬಿಲ್ಲವ ಮತ್ತು ಪಕ್ಷೇತರ ಸದಸ್ಯೆ ಕಮಲ ಮಂಜುನಾಥ್ ಪೂಜಾರಿ ನಾಮಪತ್ರ ಸಲ್ಲಿಸಿದ್ದರು.
23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ 14, ಕಾಂಗ್ರೆಸ್ 8 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದು, ಸಭೆಗೆ ಕಾಂಗ್ರೆಸ್‌ನ ಓರ್ವ ಸದಸ್ಯೆ ಅನಿವಾರ್ಯ ಕಾರಣದಿಂದ ಗೈರು ಹಾಜರಾಗಿದ್ದರು. ಚುನಾವಣೆಯಲ್ಲಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗಿಯಾಗಿ ತಮ್ಮ ಮತವನ್ನು ಚಲಾಯಿಸಿದರು. ಹಾಗಾಗಿ ಬಿಜೆಪಿ ಅಭ್ಯರ್ಥಿ ಗಳು 14 ಮತ್ತು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಎಂಟು ಮತ ಗಳನ್ನು ಗಳಿಸಿದರು.
ಚುನಾವಣೆಯ ಅಧಿಕಾರಿಯಾಗಿ ತಹಶಿಲ್ದಾರ್ ಶೋಭಾಲಕ್ಷ್ಮೀ ಕಾರ್ಯ ನಿರ್ವಹಿಸಿದರು. ಕುಂದಾಪುರ ಪುರಸಭೆಗೆ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡ ಮೋಹನದಾಸ್ ಶೆಣೈ ಒಟ್ಟು ಐದು ಬಾರಿ ಸದಸ್ಯರಾಗಿ ಆಯ್ಕೆ ಯಾಗಿ ದ್ದಾರೆ. ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ಕ್ಷೇತ್ರಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್, ಪಕ್ಷದ ಪ್ರಮುಖರಾದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶಂಕರ ಅಂಕದಕಟ್ಟೆ, ಸುರೇಶ ಶೆಟ್ಟಿ ಕಾಡೂರು, ಸುರೇಂದ್ರ ಸಂಗಮ್ ಮೊದಲಾದವರಿದ್ದರು.